ಸುದ್ದಿಮೂಲ ವಾರ್ತೆ
ಬೆಳಗಾವಿ, ನ. 05 : ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹಾಗಾಗಿ, ಆಹಾರ ಮತ್ತು ಆರೋಗ್ಯದ ಕಡೆಗೆ ನಾವೆಲ್ಲರೂ ಗಮನ ಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಸಿ.ಪಿ.ಎ.ಡ್ ಮೈದಾನದಲ್ಲಿ ಭಾನುವಾರ ಅಗಸ್ತ್ಯ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸೀನಿಯರ್ ಸೇವಾ ವಾಕ್ಥಾನ್ ಮತ್ತು ಸೀನಿಯರ್ ಹೆಲ್ಪ್ ಲೈನ್, ಸೇವಾ ಮಿತ್ರದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಿದ್ದರು.
ಬಳಿಕ ಮಾತನಾಡಿ, ನಾವು ಯಾರ ಮೇಲೆಯೂ ಅವಲಂಬಿತರಾಗದೇ ನಮ್ಮ ಕಾಲ ಮೇಲೆ ನಾವು ಎನ್ನುವಂತೆ ಉತ್ತಮ ಆರೋಗ್ಯಕ್ಕಾಗಿ, ಒಳೆಯ ಉಸಿರಾಟಕ್ಕಾಗಿ ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸೋಣ ಎಂದರು.
ವೃದ್ದಾಪ್ಯದಲ್ಲಿ ನಾವು ಯಾರಿಗೂ ಹೊರೆಯಾಗೋದು ಬೇಡ. ಆರೋಗ್ಯದಿಂದ ಹಾಗೂ ಪ್ರೀತಿಯಿಂದ ಮನೆಯಲ್ಲಿ ಹಾಗೂ ಸಮಾಜದಲ್ಲಿರೋಣ. ಬೆಳಗಾವಿಯಲ್ಲಿ ಇಂತಹ ಆರೋಗ್ಯಕರ ಹವ್ಯಾಸವನ್ನು ಬೆಳೆಸಿಕೊಂಡಿರುವುದ ಸ್ವಾಗತಾರ್ಹ. ನಮ್ಮ ಬೆಳಗಾವಿಯ ಇಷ್ಟೊಂದು ಜನ, ಇಂತಹ ಮ್ಯಾರಥಾನ್ ನಲ್ಲಿ ಭಾಗವಹಿಸಿರುವುದನ್ನು ನೋಡಿದರೆ ಬೆಳಗಾವಿ ಆರೋಗ್ಯಕರವಾಗಿದೆ, ಜತೆಗೆ ಮುಂದೆಯೂ ಆರೋಗ್ಯಕರವಾಗಿರುತ್ತದೆ ಎಂದು ಖಾತ್ರಿಯಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಅಧ್ಯಕ್ಷರಾಗಿರುವ ಅಡಿವೆಪ್ಪ ಬೆಂಡಿಗೇರಿ, ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಅಧ್ಯಕ್ಷ ಬಸವರಾಜ ಗೋಮಾಡಿ, ಅಗಸ್ತ್ಯ ಫೌಂಡೇಷನ್ ಅಧ್ಯಕ್ಷೆ ಪೂರ್ಣಿಮಾದೇವಿ ಜಗತಾಫ್, ಜೈಭಾರತ ಫೌಂಡೇಶನ್ ನ ಪದಾಧಿಕಾರಿಗಳು, ಅಶೋಕ ಐರನ್ ಗ್ರುಪ ನ ಸಿಈಓ ವೆಂಕಟರಮಣ ಹಾಗೂ ಗೋಲ್ಡ್ ಪ್ಲಸ್ ನ ಪದಾಧಿಕಾರಿಗಳು, ನವೀನ್ ಉದೋಶಿ, ಶಶಿಕಲಾ ಕೊಪ್ಪದ, ನಗರದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.