ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.14: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಂಪುಟದಲ್ಲಿರುವ ಕೆಲ ಸಚಿವರು ಮುಂದಿನ ದಿನಗಳಲ್ಲಿ ಅಧಿಕಾರ ತ್ಯಾಗಕ್ಕೆ ಸಜ್ಜಾಗುವಂತೆ ಸಿಗ್ನಲ್ ನೀಡಲಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಇದನ್ನು ಸೂಚ್ಯವಾಗಿ ಹೇಳಿದ್ದು ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಹಲವರು ದುಡಿದಿದ್ದಾರೆ. ಹೀಗಾಗಿ ನನ್ನನ್ನು ಸೇರಿದಂತೆ ಈಗ ಸಚಿವರಾಗಿರುವವರು ಎರಡೂವರೆ ವರ್ಷಗಳ ನಂತರ ಅಧಿಕಾರ ತ್ಯಾಗಕ್ಕೆ ಸಜ್ಜಾಗಬೇಕು ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ತಳಹಂತದಿಂದ ಹಿಡಿದು ಮೇಲು ಹಂತದವರೆಗೆ ಅಧಿಕಾರ ಹಂಚಿಕೆಯ ಕೆಲಸವಾಗಬೇಕು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸುವ ಕೆಲಸವಾಗಬೇಕು ಎಂದು ವಿವರಿಸಿದರು.
ಇವತ್ತು ಮಂತ್ರಿಗಳಾಗಿರುವವರು ಅಧಿಕಾರ ತ್ಯಾಗಕ್ಕೆ ಸಜ್ಜಾಗಬೇಕು. ಯಾಕೆಂದರೆ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಉಳಿದವರಿಗೂ ಮಂತ್ರಿಗಿರಿ ಸಿಗಬೇಕು ಎಂದು ಮುನಿಯಪ್ಪ ಅವರು ಹೇಳಿದಾಗ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರು ಮುನಿಯಪ್ಪ ಅವರ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ಮಾತನಾಡಿ, ಮುಂದಿನ ದಿನಗಳಲ್ಲಿ ಹಲವು ಮಂತ್ರಿಗಳನ್ನು ಬದಲಿಸಬೇಕಾಗುತ್ತದೆ ಎಂದರು.
ಅಧಿಕಾರ ಹಂಚಿಕೆ ಎಂಬುದು ಎಲ್ಲ ಹಂತಗಳಲ್ಲಿ ನಡೆಯಬೇಕು ಎಂದ ಅವರು, ಇದಕ್ಕೆ ಪೂರಕವಾಗಿ ಅಧಿಕಾರ ತ್ಯಾಗಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವಂತೆ ಅವರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.
ನ್ಯಾಯಾಲಯದ ಆದೇಶ ಬಂದ ನಂತರ ಯಾವುದೇ ಕ್ಷಣದಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವುದು ಅನಿವಾರ್ಯ ಎಂದು ನುಡಿದರು.
ನಾವು 2028 ರ ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ಅಧಿಕಾರ ಹಿಡಿಯಬೇಕು. ಈ ಗುರಿಯೊಂದಿಗೆ ನಾವು ಪ್ರತಿ ಚುನಾವಣೆಗಳನ್ನು ಎದುರಿಸಬೇಕು ಎಂದು ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಹೇಳಿದರು.