ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 2: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಮಧ್ಯಾಹ್ನ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ಗೆ ರಣಹದ್ದು ಡಿಕ್ಕಿ ಹೊಡೆದ ಪರಿಣಾಮ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಭಾರಿ ಅವಘಡವೊಂದು ತಪ್ಪಿದೆ.
ಹೆಲಿಕಾಪ್ಟರ್ನಲ್ಲಿ ಡಿ.ಕೆ. ಶಿವಕುಮಾರ್, ಅಂಗರಕ್ಷಕರು, ಮಾಧ್ಯಮ ಪ್ರತಿನಿಧಿಗಳು ಮತ್ತು ಇಬ್ಬರು ಪೈಲಟ್ ಸಹಿತ 7 ಮಂದಿ ಇದ್ದರು. ಎಚ್ಎಎಲ್ನಿಂದ ಹೊರಟಿದ್ದ ಹೆಲಿಕಾಪ್ಟರ್ ಹೊಸಕೋಟೆ ತಲುಪುತ್ತಿದ್ದಂತೆ ರಣಹದ್ದುವೊಂದು ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಹೆಲಿಕಾಪ್ಟರ್ನ ಒಂದು ಭಾಗದ ಗಾಜು ಒಡೆದುಹೋಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೈಲಟ್ಗಳು ಹೆಲಿಕಾಪ್ಟರ್ನ್ನು ಜಾಗರೂಕತೆಯಿಂದ ಮರಳಿ ಎಚ್ಎಎಲ್ ನಿಲ್ದಾಣಕ್ಕೆ ತಂದು ಇಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್ ಅವರು ‘ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜತೆಗಿದ್ದು, ನನ್ನನ್ನು ಕಾಪಾಡಿದ್ದಾರೆ. ನಮ್ಮ ಹೆಲಿಕಾಪ್ಟರ್ ಟೇಕಾಫ್ ಆಗಿ 7-8 ನಿಮಿಷ ಕಳೆದಿತ್ತು. ನಾವು ಹೊಸಕೋಟೆ ಹತ್ತಿರ ತಲುಪಿದಾಗ ದೊಡ್ಡ ಹದ್ದು ಬಂದು ಡಿಕ್ಕಿ ಹೊಡೆಯಿತು. ಮಾಧ್ಯಮದವರು ಪಕ್ಷದ ಪ್ರಣಾಳಿಕೆ ಕುರಿತು ಸಂದರ್ಶನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್ ಹಾರಾಟದ ಎತ್ತರವನ್ನು ಕಡಿಮೆ ಮಾಡಿ ನಮ್ಮನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.
ಇದು ಆಕಸ್ಮಿಕವಾಗಿ ಆಗಿರುವ ಘಟನೆ, ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ. ಪ್ರಯಾಣದ ವೇಳೆ ಮೂರು ಹದ್ದುಗಳು ಎದುರಾಗಿದ್ದು, ಪೈಲಟ್ ಎರಡು ಹದ್ದುಗಳನ್ನು ದಾಟಿದ್ದರು. ಮೂರನೇ ಹದ್ದು ಕೆಳಗಡೆಯಿಂದ ಮೇಲೆ ಬಂದು ಡಿಕ್ಕಿ ಹೊಡೆಯಿತು. ಯಾರೂ ಇದರಿಂದ ಗಾಬರಿಯಾಗುವುದು ಬೇಡ, ಇದೊಂದು ಆಕಸ್ಮಿಕ ಎಂದು ತಿಳಿಸಿದರು.
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಡಿ.ಕೆ. ಶಿವಕುಮಾರ್ ಕಾರಿನಲ್ಲಿ ಮುಳಬಾಗಿಲಿನತ್ತ ಪ್ರಯಾಣ ಬೆಳೆಸಿದರು.