ಸುದ್ದಿಮೂಲವಾರ್ತೆ
ಕೊಪ್ಪಳ,ಅ.6:ತೀವ್ರತರವಾದ ಮಿಷನ್ ಇಂದ್ರಧನುಷ್ ದಡಾರ ರುಬೆಲ್ಲಾ ನಿರ್ಮೂಲನೆಯೆಡೆಗೆ ದೊಡ್ಡ ಹೆಜ್ಜೆ ಎನ್ನುವ ಸಂದೇಶದ ಮಿಷನ್ ಇಂದ್ರಧನುಷ್ 5.0 ಅಭಿಯಾನವು ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಕ್ಟೋಬರ್ 06ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ಅಭಿಯಾನವು ಅಚ್ಚುಕಟ್ಟಾಗಿ ನಡೆದಂತೆ ಮೂರನೇ ಹಂತದ ಅಭಿಯಾನವು ಸಹ ಅಕ್ಟೋಬರ್ 9ರಿಂದ ಅಕ್ಟೋಬರ್ 14ರವರೆಗೆ ಸಹ ಮಾರ್ಗಸೂಚಿಯಂತೆ ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಬ್ಬದ ವಾತಾವರಣ ನಿರ್ಮಿಸಿ:
ಜಿಲ್ಲೆಯ ಎಲ್ಲಾ ಕಡೆಗಳಲ್ಲಿ
ಹಬ್ಬದ ರೀತಿಯಲ್ಲಿ ಅಂಗನವಾಡಿಯಲ್ಲಿ ಈ ಅಭಿಯಾನ ನಡೆಸಬೇಕು. ತಾಯಂದಿರ ಸಭೆಯಲ್ಲಿ ಮಾಹಿತಿ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮನ್ವಯತೆ ಇರಲಿ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಅಭಿಯಾನಕ್ಕೆ ಸರಿಯಾದ ಮೇಲ್ವಿಚಾರಣೆ ನಡೆಸಬೇಕು. ವಿವಿಧ ಇಲಾಖೆಗಳ ಸಹಕಾರ ಪಡೆದು
ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕರಪತ್ರ, ಬ್ಯಾನರ್ ಹಾಕಿ ವ್ಯಾಪಕ ಜನಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಾಥಾ ನಡೆಸಲು ಸೂಚನೆ:
ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಲ್ಲಿ ಜಾಥಾ ನಡೆಸಿ ಜಾಗ್ರತಿ ಮೂಡಿಸಬೇಕು.
ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲಸಿಕಾ ಸತ್ರ ತೆರೆದು ಲಸಿಕೆ ನೀಡಲು ವ್ಯವಸ್ಥೆ ಮಾಡಬೇಕು. ಕಾರ್ಮಿಕ ಇಲಾಖೆಯ ಅಧಿಕಾರಿಗಳು
ಕಟ್ಟಡ ಕಾರ್ಮಿಕರ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು,
ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು. ಕಾರ್ಯಕ್ರಮದ ಬಗ್ಗೆ ವಾರ್ತಾಧಿಕಾರಿಗಳು ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಈ ಅಭಿಯಾನವು ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯಲ್ಲಿ 7 ರಿಂದ 12ರವರೆಗೆ ಅದೇ ರೀತಿ ಸೆಪ್ಟೆಂಬರ್ ಮಾಹೆಯಲ್ಲಿ 11 ರಿಂದ 16ರವರೆಗೆ ನಡೆದಿದೆ. ಮೂರನೇ ಹಂತದ ಅಭಿಯಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಜಿಲ್ಲಾ ಆರ್ ಸಿಎಚ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಹಾಗೂ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.