ಸುದ್ದಿಮೂಲವಾರ್ತೆ
ಕೊಪ್ಪಳ ಆಗಸ್ಟ್ 02: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ 5.0 ಕಾರ್ಯಕ್ರಮ ನಡೆಸುವ ಕುರಿತು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆ ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ 07ರಿಂದ 12ರವರೆಗೆ ಮಿಷನ್ ಇಂದ್ರಧನುಷ್ ಅಭಿಯಾನವನ್ನು ಅಚುಕಟ್ಟಾಗಿ ನಡೆಸಬೇಕು. ಲಸಿಕೆಯಿಂದ ವಂಚಿತರಾದ ಗರ್ಭಿಣಿ ಹಾಗೂ ಮಕ್ಕಳನ್ನು ಗುರುತಿಸಿ ಅವರಿಗೆ ಕಡ್ಡಾಯ ಲಸಿಕೆ ನೀಡಿ ಪ್ರಗತಿ ಸಾಧಿಸುವಂತೆ ಜಿಲ್ಲಾ ಮಟ್ಟದ ಅಂತರ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಸಮಸ್ಯಾತ್ಮಕ ಪ್ರದೇಶಗಳಾದ ಇಟ್ಟಂಗಿಬಟ್ಟಿ, ಕಟ್ಟಡ ಕಾರ್ಮಿಕರು, ತೋಟದ ಮನೆಗಳಲ್ಲಿ ವಾಸಿಸುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಲಸಿಕೆ ಹಾಕಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಆರೋಗ್ಯ ಸಂಸ್ಥೆಗಳ ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ, ಲಸಿಕೆಯಿಂದ ವಂಚಿತರಾದ ಗರ್ಭಿಣಿ ಮತ್ತು ಮಕ್ಕಳ ಸಮೀಕ್ಷೆ ಮಾಡಿ ಪಟ್ಟಿ ತಯಾರಿಸಿ ಕ್ರಿಯಾ ಯೋಜನೆಯನ್ನು ರಾಜ್ಯಮಟ್ಟಕ್ಕೆ ಸಲ್ಲಿಸಲಾಗಿದೆ. ರಾಜ್ಯಮಟ್ಟದಿಂದ ಬಂದ ಮಾರ್ಗಸೂಚಿಯಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾದ ಬಳ್ಳಾರಿಯ ಎಸ್.ಎಂ.ಓ ಡಾ.ಶ್ರೀಧರ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ರುಬೆಲ್ಲಾ ಮತ್ತು ದಡಾರ ನಿರ್ಮೂಲನೆ ಮಾಡಲು ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ವಿವಿಧ ಇಲಾಖೆಗಳು ಸದರಿ ಕಾರ್ಯಕ್ರಮಕ್ಕೆ ಸಮನ್ವಯ ಸಾಧಿಸಿ ಯಶಸ್ವಿಗೊಳಿಸಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿ ಮತ್ತು 05 ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಜೊತೆ ಹಂಚಿಕೊಳ್ಳುವುದು. ತಾಯಂದಿರ ಸಭೆಯಲ್ಲಿ ಅರಿವು ಮೂಡಿಸುವುದು, ಪಂಚಾಯತ್ ರಾಜ್ ಇಲಾಖೆಯಿಂದ ಕಸ ವಿಲೆವಾರಿ ವಾಹನಗಳಲ್ಲಿ ಜಿಂಗಲ್ಸ್ ಹಾಕಿ ಪ್ರಚಾರ, ಶಿಕ್ಷಣ ಇಲಾಖೆಯಿಂದ ಶಾಲಾ ಪ್ರಾರ್ಥನೆ ಸಮಯದಲ್ಲಿ ಘೋಷಣೆ ಮತ್ತು ಜಾಥ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ಅರಿವು ಮೂಡಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಪೋಸ್ಟರ್ ಬಿಡುಗಡೆ: ಆಗಸ್ಟ್ 07ರಿಂದ 12ರವರೆಗೆ ನಡೆಯಲಿರುವ ಮಿಷನ್ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮದ ಜಾಗೃತಿ ಕುರಿತಾದ ಪೋಸ್ಟರ್ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಹೆಚ್., ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ವೆಂಕಟೇಶ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಶಶಿಧರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳಾದ ಡಾ.ರಮೇಶ ಮೂಲಿಮನಿ, ತಜ್ಞವೈದ್ಯರಾದ ಡಾ.ಈಶ್ವರ ಸವಡಿ ಹಾಗೂ ಎಲ್ಲಾ ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.