ಕುಷ್ಟಗಿ, ಜ. 20: ವಸತಿ ಇಲಾಖೆ ಹಾಗೂ ಕರ್ನಾಟಕ ಕೊಳಗೇರಿ ಪ್ರದೇಶ ಅಭಿವೃದ್ಧಿ ನಿಗಮ ಮಂಡಳಿಯಿಂದ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 45.57 ಕೋಟಿ ರೂ.ಗಳ ವೆಚ್ಚದಲ್ಲಿ 715 ಮನೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಪಟ್ಟಣದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ನಿರ್ಗತಿಕ ಬಡ ಕುಟುಂಬಗಳಿಗೆ ಸದ್ಯ ಮಾರುತಿ ನಗರದ ಬಳಿಯ ಲಭ್ಯವಿರುವ ಕೊಳಗೇರಿ ಪ್ರದೇಶ ಅಭಿವೃದ್ಧಿ ನಿಗಮಕ್ಕೆ ಸೇರಿದ ಜಾಗೆಯಲ್ಲಿ 200 ಮನೆಗಳಿಗೆ ಮಾತ್ರ ನಿರ್ಮಾಣಕ್ಕೆ ಅವಕಾಶ ಲಭ್ಯವಾಗಿದೆ. ಉಳಿದ ಮನೆಗಳನ್ನು ಶೀಘ್ರದಲ್ಲೇ 50 ಎಕರೆ ಖರೀದಿಸಲಾಗುವ ಖಾಸಗಿ ಜಮೀನಿನಲ್ಲಿ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.
340 ಚ.ಅಡಿ ಅಳತೆಯ ಒಂದು ನಿವೇಶನದಲ್ಲಿ ಬೆಡ್ ರೂಮ್, ಹಾಲ್, ಶೌಚಾಲಯ ಹಾಗೂ ಸ್ನಾನದ ಕೊಠಡಿಯ ಮನೆಯನ್ನು ಕೊಳಗೇರಿ ಮಂಡಳಿಯಿಂದ ನಿರ್ಮಿಸಿ ಕೊಡಲಾಗುತ್ತದೆ. ಮನೆಗಳ ನಿರ್ಮಾಣದ ಹೊಣೆಯನ್ನು ಬಳ್ಳಾರಿ ಮೂಲದ ಗುತ್ತಿಗೆದಾರರು ವಹಿಸಿಕೊಂಡಿದ್ದು,18 ತಿಂಗಳು ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದ ಬಯ್ಯಾಪೂರ ಅವರು, ಇಲ್ಲಿ ಈ ಅನುದಾನದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸೌಲಭ್ಯಗಳಿರುವುದಿಲ್ಲ. ಇವುಗಳನ್ನು ಕಲ್ಪಿಸಲು ಸರ್ಕಾರದಿಂದ ಪ್ರತ್ಯೇಕ ಅನುದಾನ ಮಂಜೂರು ಕೋರಿ ಪತ್ರ ಬರೆಯಲಾಗಿದೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪಂಗಡ ಫಲಾನುಭವಿಗಳು ಸರ್ಕಾರಕ್ಕೆ ಸುಮಾರು 60 ಸಾವಿರ ರೂಪಾಯಿ ತುಂಬಬೇಕಾಗುತ್ತದೆ. ಇತರೆ ಸಮುದಾಯದವರು ಸುಮಾರು 95 ಸಾವಿರ ರೂಪಾಯಿಗಳ ಡಿಡಿ ಮೊತ್ತ ತುಂಬಿ ನಿವೇಶನ ಹೊಂದಬಹುದಾಗಿದೆ. ಅಷ್ಟೇ ಅಲ್ಲದೆ ಮನೆ ನಿರ್ಮಾಣಕ್ಕೆ ಫಲಾನುಭವಿಗಳು ನಿವೇಶನದ ಮೇಲೆ ಸುಮಾರು 2.5 ಲಕ್ಷ ರೂಪಾಯಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಒಟ್ಟು 6.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಂತರ ಫಲಾನುಭವಿಗಳಿಗೆ ಮನೆಗಳು ಲಭ್ಯವಾಗಲಿವೆ. ಇನ್ನುಳಿದ ಮನೆಗಳನ್ನು ಬೇರೆಡೆ ಸರ್ಕಾರ ನಿಗದಿಪಡಿಸಿದ ಜಾಗೆಯಲ್ಲಿ ನಿವೇಶನ ಒದಗಿಸಲಾಗುತ್ತದೆ ಎಂದು ಶಾಸಕ ಬಯ್ಯಾಪೂರ ಅವರು ತಿಳಿಸಿದರು.
ಈ ವೇಳೆ ಪುರಸಭೆಯ ಅಧ್ಯಕ್ಷ ಜಿ.ಕೆ.ಹಿರೇಮಠ, ಬೆಂಗಳೂರು ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ನಿರ್ದೇಶಕ ನಾಗರಾಜ ಎನ್.ಬಿರಾದಾರ ಹಾಗೂ ಅಧಿಕಾರಿಗಳು ಸೇರಿದಂತೆ ಪುರಸಭೆ ಸದಸ್ಯರಾದ ಗೀತಾ ಮಹೇಶ ಕೋಳೂರು, ವಸಂತ ಮೇಲಿನಮನಿ, ಅಂಬಣ್ಣ ಭಜಂತ್ರಿ, ರಾಮಣ್ಣ ಬಿನ್ನಾಳ, ಜಯತೀರ್ಥ ಆಚಾರ, ಸೈಯದ್ ಖಾಜಾ ಮೈನುದ್ದಿನ್ ಮುಲ್ಲಾ, ಮುಖ್ಯಾಧಿಕಾರಿ ಬುಡ್ಡಪ್ಪ ಬಂಡಿವಡ್ಡರ್, ಕಂದಾಯ ಖಾಜಾ ಹುಸೇನ್, ಚಿರಂಜೀವಿ ದೊಡ್ಡಮನಿ ಹಾಗೂ ಮುಖಂಡರಾದ ಉಮೇಶ ಮಂಗಳೂರು, ಮಹೇಶ ಕೋಳೂರು ಹಾಗೂ ಮಾರುತಿ ನಗರದ ನಿವಾಸಿಗಳು ಉಪಸ್ಥಿತರಿದ್ದರು.