ಸುದ್ದಿಮೂಲ ವಾರ್ತೆ
ಮೈಸೂರು,ನ.27:ನಂಜನಗೂಡು ತಾಲೂಕು ಹೆಡಿಯಾಲ ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿ ನರಭಕ್ಷಕ ಹುಲಿ ಸೆರೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಸಾಕಾನೆಗಳ ನೆರವಿನಿಂದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದೆರಡು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಡ್ರೋಣ್ ಕ್ಯಾಮರಾ ಮೂಲಕ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಆದರೂ ಪತ್ತೆಯಾದ ನರಭಕ್ಷಕ ಹುಲಿಯ ಸುಳಿವು ಸಿಗುತ್ತಿಲ್ಲ. ಇದರಿಂದ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಮನೆಯಿಂದ ಹೊರಬರಲು, ಜಮೀನುಗಳತ್ತ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಕಾರ್ಯಾಚರಣೆ ವೇಳೆ ಎರಡು ಹುಲಿಗಳು ಓಡಾಡುತ್ತಿರುವುದು ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗುತ್ತಿದ್ದು, ಹಾಗಾಗಿ ಕಾಡಂಚಿನ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.
ಕೆಲವೇ ದಿನಗಳಲ್ಲಿ ಸೇರೆ
ನಂಜನಗೂಡು ತಾಲೂಕಿನ ಹೆಡಿಯಾಲ ಮತ್ತು ಬಳ್ಳೂರು ಹುಂಡಿ ಗ್ರಾಮಗಳ ಜನರನ್ನು ಬೆಚ್ಚಿ ಬೆಳಿಸಿರುವ ನರಭಕ್ಷಕ ಹುಲಿಯ ಸೆರೆಗೆ ಕೌಂಟ್ ಡೌನ್ ಶುರುವಾಗಿದೆ ಎಂದು ನಂಜನಗೂಡಿನಲ್ಲಿ ಸುದ್ದಿಗಾರರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದ್ದಾರೆ.
ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿರುವ ನರಹಂತಕ ಹುಲಿಯನ್ನು 2 ದಿನಗಳ ಒಳಗಾಗಿ ಸೆರೆ ಹಿಡಿಯುತ್ತಾರೆ. ಈಗಾಗಲೇ ನೂರು ಜನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು, 50ಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಡ್ರೋನ್ ಕ್ಯಾಮರಾದ ಮೂಲಕ ಹುಲಿಯ ಚಲನ ವಲನಗಳನ್ನು ಸೆರೆ ಹಿಡಿದು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.
ಹುಲಿ ಸಂರಕ್ಷಣಾ ಪ್ರಾಧಿಕಾರ ದೆಹಲಿಯಿಂದ ಈಗಾಗಲೇ ಹುಲಿ ಸೆರೆಗೆ ಪತ್ರ ರವಾನೆಯಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ವಹಿಸಿ ನರಭಕ್ಷಕ ಹುಲಿಯ ಸರೆಗೆ ಮುಂದಾಗಿದ್ದಾರೆ.ಹೆಡಿಯಾಲ ಮತ್ತು ಬಳ್ಳೂರು ಹುಂಡಿ ಗ್ರಾಮದ ಸುತ್ತಮುತ್ತಲ ಸಾರ್ವಜನಿಕರು ರೈತರು ಮಹಿಳೆಯರು ಆತಂಕ ಪಡುವುದು ಬೇಡ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು, ಯಾರು ಭಯಪಡುವುದು ಬೇಡ.ಹೆಡಿಯಾಲ ಮತ್ತು ಓಂಕಾರ ಅರಣ್ಯ ವಲಯದಲ್ಲಿ ಅಧಿಕಾರಿಗಳು ಒಮ್ಮತದಿಂದ ಕಾರ್ಯನಿರ್ವಹಿಸುತ್ತಿಲ್ಲ.ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷತನ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಮತ್ತು ಲೋಪದ ಬಗ್ಗೆ ಚರ್ಚಿಸಿ, ನಿರ್ಲಕ್ಷ್ಯತನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಈಗಾಗಲೇ ಹೆಡಿಯಾಲ ಮತ್ತು ಓಂಕಾರ ಅರಣ್ಯ ಪ್ರದೇಶದ ಅಭಿವೃದ್ಧಿಯ ಹೆಸರಿನಲ್ಲಿ ಲೋಪ ದೋಷಗಳು ನಡೆದಿದ್ದು ಅದರ ತನಿಖೆಗೂ ಮುಂದಾಗುತ್ತೇವೆ ಎಂದು ಹೇಳಿದರು.