ಸುದ್ದಿಮೂಲ ವಾರ್ತೆ
ಕುಷ್ಟಗಿ, ಜೂ. 15:ತಾಲೂಕಿನ ಟೆಂಗುಂಟಿ – ಎಂ.ಗುಡದೂರು ಗ್ರಾಮಗಳ ಸಂಪರ್ಕ ರಸ್ತೆಯ ಮಧ್ಯದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಗುರುವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 50:54 ಹಣಕಾಸು ಯೋಜನೆಯಡಿ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಿರ್ಮಾಣ ಹೊಣೆ ಹೊತ್ತುಕೊಂಡಿರುವ ಗುತ್ತಿಗೆದಾರರಿಗೆ ಅಂದಾಜು ಪಟ್ಟಿಯ ಪ್ರಕಾರ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ನಿರ್ಮಿಸಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಸೂಚಿಸಿದರು.
ಅದೇರೀತಿ ಈ ಭಾಗದ ಗ್ರಾಮಸ್ಥರು ಕೂಡ ಸೇತುವೆ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಕಾಮಗಾರಿ ನಿರ್ಮಾಣ ಹೊಣೆ ಹೊತ್ತ ಗುತ್ತಿಗೆದಾರರಿಗೆ ಸಹಕಾರ ನೀಡಬೇಕು ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಜೀವ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಮಹೇಶ್, ಮುಖಂಡರಾದ ಸಂಗನಗೌಡ ಜೈನರ, ದೊಡ್ಡಪ್ಪ ಗೋನಾಳ್, ಕಾಮಗಾರಿಯ
ಗುತ್ತಿಗೆದಾರ ವಿರೂಪಾಕ್ಷ ಲಿಂಗಶೆಟ್ಟರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.