ಕಲಬುರಗಿ, ಜು.7: ಕಾಂಗ್ರೆಸ್ ಸರ್ಕಾರದ ಚೊಚ್ಚಿಲ ಬಜೆಟ್ನಲ್ಲಿ ನಾಡಿನ ಏಳು ಕೋಟಿ ಕನ್ನಡಿಗರೂ ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿ ಆಗಬೇಕು ಎಂಬ ಸದಾಶಯ ಬಿಂಬಿತವಾಗಿದೆ. ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಕರ್ನಾಟಕ ಅಭಿವೃದ್ಧಿ ಬಯಸುವಂತಹ ಮಾದರಿ ಬಜೆಟ್ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ್ದಾರೆಂದು ಮಾಜಿ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ 5 ಗ್ಯಾರೆಂಟಿಗಳಿಗೆ ಅನುದಾನ ಒದಗಿಸಿದ್ದೇವೆ. ಕಲ್ಯಾಣ ನಾಡಿನ ಪ್ರಗತಿಗೆ ಪೂರಕವಾಗಿರುವ ಕೆಕೆಆರ್ ಡಿಬಿಗೆ ವಾರ್ಷಿಕ 5 ಸಾವಿರ ಕೋಟಿ ರುಪಾಯಿ ಅನುದಾನ ಮೀಸಲಿಡುವ ಮೂಲಕ ಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಕಾಂಗ್ರೆಸ್ ಸರ್ಕಾರದ್ದಾಗಿದೆ. ಈ ಗುರಿ ತಲುಪುವ ದಾರಿಯಲ್ಲಿನ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್ ಅನ್ನು ನಾಡಿನ ಜನತೆಗೆ ಅರ್ಪಿಸಿದ್ದೇವೆ, ಇದೊಂದು ಜನಸಾಮಾನ್ಯರ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಪ್ರತಿ ಮನೆಯವರೂ 4 ರಿಂದ 5 ಸಾವಿರ ರುಪಾಯಿ ಹೊಂದಲಿದ್ದಾರೆ. ಬಡವರಿಗೆ ಈ ನೆರವು ವರದಾನವಾಗಲಿದೆ. ಅಲ್ಪಸಂಖ್ಯಾತರಿಗೆ ಅನುಕೂಲವಾಗುವ ಶಾದಿ ಮಹೆಲ್ಗಳ ಕಾಮಗಾರಿಗಳಿಗೆ ಹಣ ಮೀಸಲಿಡಲಾಗಿದೆ. ಕೆಕೆಆರ್ ಡಿಬಿಗೆ ಅನುದಾನ ಹೆಚ್ಚಿದ್ದರಿಂದ ಈ ಭಾಗದಲ್ಲಿ ಪ್ರಗತಿಯ ಫಸಲು ಬಂಪರ್ ಬರಲಿದೆ. ಅದು ಮುಂದೆ ತಲಾ ಆದಾಯ ಹೆಚ್ಚಳವಾಗಿ ಪರಿವರ್ತನೆ ಆಗಲಿ ಎಂದಿದ್ದಾರೆ.
2017- 18 ರಲ್ಲಿ ರಾಜ್ಯದ ಸಾಲದ ಹೊರೆ 2. 45 ಲಕ್ಷ ಕೋಟಿ ರುಪಾಯಿ ಇತ್ತು. 2022- 23 ರಲ್ಲಿ ಅದು 5 ಲಕ್ಷ 16 ಸಾವಿರ ಕೋಟಿ ರು ಗೆ ಹೆಚ್ಚಿದೆ. ಈ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯನವರು ಸಾಲದ ಹೊರೆ ಹೆಚ್ಚದಂತೆ ಹಾಗೂ ಜನರಿಗೆ ಸವಲತ್ತು ದೊರಕುವಂತೆ ಚಾಕಚಕ್ಯತೆ ಪ್ರದರ್ಶಿಸುವ ಮೂಲಕ ಜನಪರ, ಬಡವರ ಪರವಾದಂತಹ ಬಜೆಟ್ ಮಂಡಿಸಿದ್ದಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.