ಸುದ್ದಿಮೂಲ ವಾರ್ತೆ
ಮೈಸೂರು,ಜೂ.15:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡವರ ಅಕ್ಕಿಯಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಹರೀಶ್ ಗೌಡ ವಾಗ್ದಾಳಿ ನಡೆಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಪಂಚ ಗ್ಯಾರಂಟಿಗಳ ಮೂಲಕ ರಾಜ್ಯ ಇಡೀ ದೇಶದಲ್ಲೇ ಸದ್ದು ಮಾಡುತ್ತಿದೆ. ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸೋಲು ಆಗುವ ಭಯ ಮೋದಿಗೆ ಶುರುವಾಗಿದೆ. ಹೀಗಾಗಿ, ರಾಜ್ಯಕ್ಕೆ ಅನ್ನಭಾಗ್ಯದಡಿ ಕೊಡುವ ಅಕ್ಕಿಗೂ ತಡೆಯೊಡ್ಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು ದೇಶ ಉದ್ಧಾರ ಮಾಡುವುದಿಲ್ಲ, ಮಾರಿಕೊಳ್ಳುತ್ತಾರೆ ಅಷ್ಟೇ. ಈಗಾಗಲೇ ಹಲವು ಸರ್ಕಾರಿ ಸ್ವಾಮ್ಯದಲ್ಲಿರುವ ಹಲವು ಇಲಾಖೆಗಳನ್ನ ಖಾಸಗೀಕರಣ ಮಾಡುತ್ತಿದ್ದಾರೆ. ಇನ್ನಷ್ಟು ವರ್ಷ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೆ ದೇಶವನ್ನೇ ಮಾರಿಬಿಡುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪೇ ಅಂಡ್ ಪಾರ್ಕ್
ಪೇ ಅಂಡ್ ಪಾರ್ಕ್ ಗೆ ನನ್ನ ವಿರೋಧವಿದೆ. ಪೇ ಅಂಡ್ ಪಾರ್ಕ್ ಮಾಡಲು ಹೊರಟಿರುವ ಸ್ಥಳಗಳು ಪ್ರವಾಸಿಗರು ಬಂದು ಹೋಗುವ ಜಾಗವಲ್ಲ. ಪ್ರತಿನಿತ್ಯ ನಮ್ಮ ಸ್ಥಳೀಯರೇ ಬಂದು ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಗ್ರಾಹಕರು, ವರ್ತಕರ ವಾಹನಗಳೇ ಹೆಚ್ಚಾಗಿ ನಿಲ್ಲಿಸುವುದು. ಅದಕ್ಕಾಗಿ ಪೇ ಅಂಡ್ ಪಾರ್ಕ್ ನೀತಿ ಜಾರಿಗೆ ತರಲು ಮುಂದಾಗಿದ್ದ ಪಾಲಿಕೆಯ ನಿರ್ಧಾರಕ್ಕೆ ನನ್ನ ಆಕ್ಷೇಪ ಇದ್ದೇ ಇದೆ. ಈ ಪ್ರಕ್ರಿಯೆ ಕೈ ಬಿಟ್ಟರೆ ಸೂಕ್ತ ಎಂದರು.