ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 23: ದೇವದುರ್ಗದ ನೂತನ ಶಾಸಕಿ ಕರೆಮ್ಮ ಅವರು ಮಂಗಳವಾರ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರ ಕೊಠಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಶಾಸಕರ ಪ್ರಮಾಣವಚನಕ್ಕಾಗಿ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಸೋಮವಾರ ಗೈರುಹಾಜರಾಗಿದ್ದ ಕರೆಮ್ಮ ಅವರು ಮಂಗಳವಾರ ವಿಧಾನಸೌಧಕ್ಕೆ ಬಂದಿದ್ದರು.
ವಿಧಾನಮಂಡಲ ಅಧಿವೇಶನದಲ್ಲಿ ಕರೆಮ್ಮ ಅವರನ್ನು ಪ್ರಮಾಣ ವಚನಕ್ಕಾಗಿ ಆಹ್ವಾನಿಸಲಾಯಿತು. ಆದರೆ, ಆ ವೇಳೆ ಅವರು ಅಧಿವೇಶನದಲ್ಲಿ ಹಾಜರಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ, ಕರೆಮ್ಮ, ಪ್ರಿಯಾಕೃಷ್ಣ, ಮಧು ಬಂಗಾರಪ್ಪ ಸಹಿತ ಪ್ರಮಾಣ ವಚನ ಸ್ವೀಕರಿಸಲು ಹಾಜರಿರಲಿಲ್ಲ. ಆಗ ಕಲಾಪ ಮುಂದೂಡಿದ ಸ್ಪೀಕರ್ ಆರ್.ವಿ. ದೇಶಪಾಂಡೆ, ತಡವಾಗಿ ಬಂದ ಶಾಸಕರು ತಮ್ಮ ಕೊಠಡಿಗೆ ಬಂದು ಪ್ರಮಾಣವಚನ ಸ್ವೀಕರಿಸುವಂತೆ ಸೂಚನೆ ನೀಡಿದ್ದರು.
ಕರೆಮ್ಮ ಅವರು ಸ್ಪೀಕರ್ ಕೊಠಡಿಗೆ ತೆರಳಿ ಆರ್.ವಿ. ದೇಶಪಾಂಡೆ ಅವರ ಸಮ್ಮುಖದಲ್ಲಿ, ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬಳಿಕ ಶಾಸಕಿ ಕರೆಮ್ಮ ಅವರು ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮ್ಯ ಸಹಿತ ಸರ್ಕಾರದ ಹಿರಿಯ ಸಚಿವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಅವರ ಸಹಕಾರ ಕೋರಿದರು.