ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ ,ಆಗಸ್ಟ್23 : ರಾಜ್ಯದ 224 ಕ್ಷೇತ್ರಗಳಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಬಹಳ ಹಿಂದುಳಿದ್ದು ಅದನ್ನು ಅಭಿವೃಧ್ಧಿಗೊಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಸಮಾನ ಆದ್ಯತೆ ನೀಡಿ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡಲಾಗುವುದು ಎಂದು ಶಾಸಕ ಮೇಲೂರು ರವಿಕುಮಾರ್ ಕರೆ ನೀಡಿದರು.
ತಾಲೂಕಿನ ಮುತ್ತೂರು ಗ್ರಾಮದಲ್ಲಿ ಐ.ಐ.ಟಿ ಮದ್ರಾಸ್ ತಾಂತ್ರಿಕ ನೆರವು, ಕಾರ್ಪೋರೇಟ್ ಸಂಸ್ಥೆಯ ಧನ ಸಹಾಯ ಹಾಗೂ ಆಕ್ವಾ ಮ್ಯಾಪ್ ಸಂಸ್ಥೆಯ ಕಾಮಗಾರಿಯಿಂದ, ಚರಂಡಿಗಳಿಂದ ಕೆರೆಗೆ ಹೋಗುತ್ತಿದ್ದ ಗ್ರಾಮದ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಪುನಃ ಕೆರೆಗೆ ಬಿಡುವ ಘಟಕವನ್ನು ಬುಧವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದ ಇತರೆ ಆಯ್ದ ಗ್ರಾಮಗಳಲ್ಲಿ ಕೂಡ ಇದೇ ರೀತಿಯ ಘಟಕಗಳನ್ನುಮಾಡಲಾಗುವುದು. ಶುದ್ಧ ನೀರು, ಸ್ವಚ್ಛತೆ, ಆರೋಗ್ಯ ಮುಂತಾದ ಮೂಲಭೂತ ಸೌಕರ್ಯಗಳು ನಮ್ಮ ಜನಕ್ಕೆ ಸಿಗಬೇಕು ಎಂದು ಹೇಳಿದರು.
ಐ.ಐ.ಟಿ ಮದ್ರಾಸ್ ಪ್ರೊ. ಲಿಜಿ ಫಿಲಿಪ್ ಮಾತನಾಡಿ, ದ್ರವ ತ್ಯಾಜ್ಯ ನಿರ್ವಹಣಾ ಘಟಕವನ್ನು ಅತ್ಯುತ್ತಮವಾಗಿ ರೂಪಿಸಿಕೊಟ್ಟಿದ್ದೇವೆ. ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಚರಂಡಿಗೆ ಹರಿಬಿಡದೇ, ಈ ಘಟದ ನಿರ್ವಹಣೆ ಹಾಗೂ ಕೆರೆಯ ನಿರ್ವಹಣೆಯನ್ನು ಗ್ರಾಮಸ್ಥರು ಒಗ್ಗೂಡಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಗ್ರಾಮದ ಎಲ್ಲಾ ಚರಂಡಿಗಳಿಂದ ಹರಿದು ಬರುವ ತ್ಯಾಜ್ಯದ ನೀರನ್ನು ಕಾಲುವೆಗಳ ಮೂಲಕ ಮೊದಲು ಸೆಪ್ಟಿಕ್ ಟ್ಯಾಂಕ್ ಗೆ ಹರಿಸಲಾಗುತ್ತದೆ. ಅಲ್ಲಿಂದ ನೆಲದಾಳದಲ್ಲಿ ರೂಪಿಸಿರುವ ವೆಟ್ ಲ್ಯಾಂಡ್ ಎಂಬ ಸಂಸ್ಕರಣಾ ಘಟಕದ ಮೂಲಕ ಈ ನೀರು ಹಾದು ಬರುತ್ತವೆ. ವಿಶೇಷವೆಂದರೆ ಈ ತಾಂತ್ರಿಕತೆಗೆ ಯಾವುದೇ ವಿದ್ಯುತ್ ಅವಶ್ಯಕತೆ ಬೇಕಿಲ್ಲ. ಶುದ್ಧೀಕರಣಗೊಂಡ ನೀರನ್ನು ಕೆರೆಗೆ ಹರಿಸಲಾಗುತ್ತದೆ. ಮುಂದಿನ ಹಂತದಲ್ಲಿ ಕೆರೆಯನ್ನು ಸುಂದರವಾಗಿಸಲು ಯೋಜನೆಯನ್ನು ಸಹ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿ ಸ್ವಚ್ಛತೆ ಕಾಪಾಡಲು ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿದ್ದೇವೆ. 2017 ರಿಂದ 2029 ವರೆಗೆ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಅದೇ ರೀತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಮಾಡಿದ್ದು ಅದಕ್ಕೆ ಎಲ್ಲರು ಸಹಕರಿಸಬೇಕು. ಜೊತೆಗೆ ಗ್ರಾಮದಲ್ಲಿ ಸ್ಥಾಪಿಸಿರುವ ತ್ಯಾಜ್ಯ ನೀರು ಶುಧ್ಧಿಕರಿಸುವ ಘಟಕದ ನೀರಿನಲ್ಲಿ ಇನ್ನೂ ದುರ್ವಾಸನೆಯಿರುವ ಕುರಿತು ಆಕ್ಷೇಪಣೆ ಕೇಳಿಬಂದಿದೆ. ಅದನ್ನು ಮೂರು ಹಂತದಲ್ಲಿ ಶುಧ್ಧಿಕರಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಕೆಂಪೇಗೌಡ, ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ಪದ್ಮಾ, ಗ್ರಾಮಾಂತರ ಟ್ರಸ್ಟ್ನ ಉಷಾಶೆಟ್ಟಿ, ಅಕ್ವಾ ಮ್ಯಾಪ್ ಸಂಸ್ಥೆಯ ಕೃಷ್ಣನ್ ನಾರಾಯಣನ್ ಸೇರಿದಂತೆ ಉಪಸ್ಥಿತರಿದ್ದರು.