ಸುದ್ದಿಮೂಲ ವಾರ್ತೆ
ಹೊಸಕೋಟೆ. ಸೆ. 5 : ರೈತರು, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದೇ ಟಿಎಪಿಎಂಎಸ್ನ ಮುಖ್ಯ ಗುರಿಯಾಗಿದ್ದು, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ರೈತರ ಪ್ರೋತ್ಸಾಹದಿಂದ ಇಷ್ಟು ಎತ್ತರಕ್ಕೆ ಬೆಳೆದಿದೆ. ಈ ಬಾರಿ ಷೇರುದಾರರಿಗೆ ಶೇ.10 ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ ತಿಳಿಸಿದರು.
ಹೊಸಕೋಟೆ ನಗರದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ 74ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರೈತರಿಗೆ ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಅವರಿಗೆ ಮಾರಾಟ ಮಾಡುವ ಮೂಲಕ ಸಹಕಾರ ಸಂಘ ಉತ್ತಮ ಸೇವೆ ಮತ್ತು ವ್ಯವಹಾರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಂದಗುಡಿ ಭಾಗದಲ್ಲಿ ಗೊಬ್ಬರ ದಾಸ್ತಾನು ಮಳಿಗೆ ನಿರ್ಮಾಣ ಮಾಡಲಾಗುವುದು. ಇದರ ಜತೆಗೆ ಸಹಕಾರ ಸಂಘದ ವತಿಯಿಂದ ರೈತರಿಗೆ ಸಹಕಾರವಾಗಲೆಂದು ಬ್ಯಾಂಕ್ ಸೇವೆ ಒದಗಿಸಲಾಗಿದ್ದು, ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಕಾರ್ಯ ನಿರ್ವಹಿಸಲಿದೆ. ಇದರ ಪ್ರಯೋಜನ ರೈತರು ಪಡೆಯಬೇಕು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ನಗರ ಬೆಂಗಳೂರು ಬೆಳೆದಂತೆ ಬೆಳೆಯುತ್ತಿದೆ.
ತಾಲೂಕಿನ ರೈತರ ಪ್ರಗತಿಗೆ ಅನುಕೂಲವಾಗುವಂತಹ ಸೇವೆಗಳನ್ನು ಹೊಸಕೋಟೆ ಟಿಎಪಿಸಿಎಂಎಸ್ ಸಂಸ್ಥೆ ಮಾಡುತ್ತಿದ್ದು, ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದೆ. ಉತ್ತಮ ಸೇವೆ ಮೂಲಕ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮನೋಭಾವವನ್ನು ತೊಡೆದು ಹಾಕಿದೆ. ಹೆಚ್ಚಿನ ವ್ಯಾಪಾರ ವಹಿವಾಟು ಹಿನ್ನೆಲೆಯಲ್ಲಿ ಟಿಎಪಿಸಿಎಂಎಸ್ಗೆ ಗೋದಾಮು ನಿರ್ಮಾಣಕ್ಕೆ ಈಗಾಗಲೇ ನಗರದ ಹೊರವಲಯದ ಗೊಣಕನಹಳ್ಳಿ ಬಳಿ 2 ಎಕರೆ ಜಾಗ ಮಂಜೂರು ಮಾಡಲಾಗಿದ್ದು, ಹೆಚ್ಚುವರಿಯಾಗಿ ಇನ್ನೂ ಎರಡು ಎಕರೆ ಜಮೀನಿಗೆ ಅನುಕೂಲ ಮಾಡಲಾಗುವುದು. ಈ ಗೋದಾಮು ಪಕ್ಕದಲ್ಲೇ ಸುಮಾರು 25 ಎಕರೆ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದರು.
ಎಪಿಎಂಸಿ ಹಾಗೂ ಟಿಎಪಿಸಿಎಂಎಸ್ ಜಾಗದ ಪಕ್ಕದಲ್ಲಿ ಚೆನ್ನೈ ಸೂಪರ್ ಎಕ್ಸ್ ಪ್ರೆಸ್ ಹೈವೇ ಹಾದು ಹೋಗಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಎಪಿಎಂಸಿ ಮಾರುಕಟ್ಟೆ ಅನುಕೂಲವಾಗಲಿದೆ. ಟಿಎಪಿಸಿಎಂಎಸ್ನಲ್ಲಿ ರಸಗೊಬ್ಬರ ಬೀಜ ಸೇರಿದಂತೆ ರೈತರಿಗೆ ಅನುಕೂಲವಾಗುವ ಸೇವೆಗಳು ಸಿಗಲಿವೆ. ಮುಂದಿನ ದಿನಗಳಲ್ಲಿ ಅಗ್ರಿಕಲ್ಚರ್ ಪಾರ್ಕ್ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.
ಟಿಎಪಿಸಿಎಂಎಸ್ನ ವ್ಯವಸ್ಥಾಪಕ ಸೋಮಣ್ಣ, ಸಹಕಾರ ಸಂಘದ 2022-23ನೇ ಸಾಲಿನ ವರದಿ ಮಂಡಿಸಿ, ಸಹಕಾರ ಸಂಘದಲ್ಲಿ ಒಟ್ಟು 6479 ಸದಸ್ಯರನ್ನೊಳಗೊಂಡು ಒಟ್ಟು 35.70 ಕೋಟಿ ಷೇರು ಬಂಡವಾಳ ಹೊಂದಿದೆ. 2022-23 ನೇ ಸಾಲಿನಲ್ಲಿ ಒಟ್ಟು 102.4 ಲಕ್ಷ ರೂ. ನಿವ್ವಳ ಲಾಭ ಹೊಂದಿದೆ ಎಂದರು.