ಸುದ್ದಿಮೂಲ ವಾರ್ತೆ
ಹೊಸಕೋಟೆ, ಜೂನ್ 10 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ದಲಿತರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಸ್ಸಿ-ಎಸ್ಟಿ ಸಮುದಾಯದ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿಯ ಜನಾಂಗದವರ ಅಹವಾಲುಗಳನ್ನು ಸ್ವೀಕರಿಸಿ, ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಿ ಪರಿಹಾರವನ್ನು ಕಂಡುಕೊಳ್ಳಲಾಯಿತು. ತಾಲೂಕಿನಲ್ಲಿ ಸಮುದಾಯಗಳ ಬಗ್ಗೆ ಸಾಕಷ್ಟು ಜಟಿಲ ಸಮಸ್ಯೆಗಳನ್ನು ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಅಗತ್ಯ ಮಾಹಿತಿಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅವಲೋಕಿಸಿ ಪರಿಹಾರಗಳನ್ನು ಕಂಡುಕೊಂಡು ಸಭೆ ನಡೆಸುವಂತೆ
ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ದೇವನಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದುನ್ನಸಂದ್ರ ಭಾಗದಲ್ಲಿ ನಾಲ್ಕು ಕುಟುಂಬಗಳಿಗೆ ಸುಮಾರು 30 ವರ್ಷಗಳಿಂದ ಸಾಗುವಳಿ ಚೀಟಿ ವಿತರಣೆ ಮಾಡಿರುವುದಿಲ್ಲ. ಕಚೇರಿಗೆ ಸಾಕಷ್ಟು ಅಲೆದಾಡಿ ಪ್ರಯಾಸಪಟ್ಟಿದ್ದರು. ಇಂಥ ಕುಟುಂಬಗಳಿಗೆ ಶಾಸಕರು ಸಾಗುವಳಿ ಚೀಟಿ ವಿತರಣೆ ಮಾಡಿ ಅತಿ ಶೀಘ್ರದಲ್ಲೇ ಖಾತೆಪಾಣಿ ನೀಡಬೇಕು ಎಂದು ಉಪತಾಶಿಲ್ದಾರ್ ಅವರಿಗೆ ಸೂಚನೆ ನೀಡಿದರು.
ನಗರದಲ್ಲಿ ಬಿಎಂಟಿಸಿ ಬಸ್ಸುಗಳು ಹೆದ್ದಾರಿಯಲ್ಲಿ ಮಾತ್ರ ಸಂಚರಿಸಿ ನಗರದ ಪ್ರಮುಖ ಭಾಗಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಮಾತನಾಡಿದರು. ಸಾಕಷ್ಟು ದೂರಗಳು ಈ ವಿಚಾರವಾಗಿ ಬಂದಿತ್ತು. ಈ ತಕ್ಷಣದಿಂದಲೇ ಎಲ್ಲ ಬಿಎಂಟಿಸಿ ಬಸ್ಸುಗಳು ಹಳೇ ಬಸ್ ನಿಲ್ದಾಣದ ಮೂಲಕ ತಾಲೂಕು ಕಚೇರಿ ವೃತ್ತ ಬಳಸಿಕೊಂಡು ಹೆದ್ದಾರಿಯಲ್ಲಿ ಸಾಗುವಂತೆ ಮಾರ್ಗ ಬದಲಾವಣೆ ಮಾಡಲು ಅಧಿಕಾರಿಗಳಿಗೆ ತಕ್ಷಣವೇ ಮಾರ್ಗದರ್ಶನ ನೀಡಿದರು.
ತಾಲೂಕಿನಲ್ಲಿ ದಲಿತರಿಗೆ ಹಕ್ಕು ಪತ್ರ ನಿವೇಶನ ಹಂಚಿಕೆ ಸಾಗುವಳಿ ಚೀಟಿ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವಂತಹ ಕೆಲಸ ಆಗಬೇಕು. ನಗರದಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಅಗತ್ಯ ಸೇವೆಗಳನ್ನ ಜನಸಾಮಾನ್ಯರಿಗೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ತಹಶೀಲ್ದಾರ್ ಪ್ರಭಾಕರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಏನ್.ಆರ್. ಸಿದ್ದರಾಜು, ಪೌರಾಯುಕ್ತ ಪ್ರಸಾದ್ ರೆಡ್ಡಿ, ಪೋಲಿಸ್ ಇಲಾಖೆ ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.