ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.09: ಮಳೆಗಾಲದಲ್ಲಿ ಅನಾವಶ್ಯಕವಾಗಿ ವ್ಯರ್ಥವಾಗುವ ಮಳೆಯ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ಆಯ್ದ ಭಾಗಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಆ ಮೂಲಕ ಸಂಗ್ರಹವಾಗುವ ನೀರನ್ನು ಕೃಷಿಗೆ, ಜಾನುವಾರುಗಳ ಬಾಯಾರಿಕೆ ನೀಗಿಸಲು ಹಾಗೂ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಮಾಕನಪುರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಟಲ್ ಭೂಜಲ ಯೋಜನೆಯಡಿ 45 ಲಕ್ಷ ರೂಪಾಯಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ, ದೊಡ್ಡ ನಲ್ಲೂರಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ ಯೋಜನೆಯಡಿ 50 ಸಾವಿರ ಲೀಟರ್ ನೀರಿನ ಸಾಮರ್ಥ್ಯದ 97 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಉದ್ಘಾಟಿಸಿದರು.
ಜಲ ಜೀವನ್ ಮೀಷನ್ ಯೋಜನೆಯ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ತಾಲೂಕಿನ ರೈತರು ಮಳೆಯ ನೀರನ್ನೇ ಸಮರ್ಪಕವಾಗಿ ಬಳಸಿಕೊಂಡು ಕೃಷಿ ಚಟುವಟಿಕೆ ಮಾಡಬೇಕು. ತಾಲೂಕಿನಲ್ಲಿ ಯಾವ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂದು ರೈತರು ಮಾಹಿತಿ ನೀಡಿದಲ್ಲಿ ಅಧಿಕಾರಿಗಳಿಂದ ಸರ್ವೇ ನೆಡೆಸಿ ನೀರಿನ ಮೂಲ ಹುಡುಕುವ ಕೆಲಸದ ಜೊತೆ ನೂತನ ಯೋಜನೆಗಳಿಗೆ ತಯಾರಿ ಮಾಡಿಕೊಳ್ಳಬಹುದಾಗಿದೆ ಎಂದರು.
ಜಲ ಜೀವನ್ ಮೀಷನ್ ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತರಾಟೆ ತೆಗೆದುಕೊಂಡ ಶಾಸಕರು, ದೊಡ್ಡ ನಲ್ಲೂರಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮೀಷನ್
ಯೋಜನೆ ಪೂರ್ಣಗೊಂಡಿದ್ದು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತೀವ್ರ ತರಾಟೆ ತೆಗೆದುಕೊಂಡರು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ, ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಸಿದ ಮೊದಲ ಗ್ರಾಮದಲ್ಲೇ ಈ ರೀತಿ ಕಳಪೆ ಗುಣಮಟ್ಟ ಕಂಡು ಬಂದರೆ ಯೋಜನೆಯ ಪ್ರಗತಿ
ಹೇಗೆ ಸಾಧ್ಯ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಕಾಮಗಾರಿಯಲ್ಲಿ ಆಗಿರುವ ಲೋಪದೋಷಗಳನ್ನು ಒಂದು ವಾರದಲ್ಲಿ ಸರಿಪಡಿಸುವಂತೆ ಆದೇಶ ನೀಡಿದರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಕಿವಿಮಾತು ಹೇಳಿ, ನಿಮ್ಮ ಗ್ರಾಮಕ್ಕೆ ಅನುದಾನ ನೀಡಿದ್ದು ಕಾಮಗಾರಿಯ ಗುಣಮಟ್ಟವನ್ನು ನೀವು ಪರಿಶೀಲಿಸಬೇಕು. ಆಗಲೇ ಉತ್ತಮ ಗುಣಮಟ್ಟದ ಕಾಮಗಾರಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ತಮ್ಮಯ್ಯ, ಚಿಕ್ಕಹುಲ್ಲೂರು ಬಚ್ಚೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಲ್.ಅಂಡ್.ಟಿ ಮಂಜುನಾಥ್, ತಾಪಂ ಮಾಜಿ ಸದಸ್ಯ ರಾಮೇಗೌಡ, ಎಸ್ಎಫ್ಸಿಎಸ್ ನಿರ್ದೇಶಕ ಗಣೇಶ್, ಮುಖಂಡರಾದ ನಾಗೇಶ್, ರಾಜ್ ಗೋಪಾಲ್, ಬಚ್ಚೇಗೌಡ, ಇಒ ಚಂದೆ ಶೇಖರ್ ಮೊದಲಾದವರು ಹಾಜರಿದ್ದರು.