ಸುದ್ದಿಮೂಲ ವಾರ್ತೆ
ಹೊಸಕೊಟೆ, ಆ.19: ಚೆಕ್ ಡ್ಯಾಂ ನಿರ್ಮಿಸುವುದರಿಂದ ಭೂಮಿಯಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿ ಕೃಷಿ ಪಂಪ್ ಸೆಟ್ಗಳ ನೀರಿನ ಮಟ್ಟ ಚೇತರಿಕೆಯಾಗಲು ಅನುಕೂಲವಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಈಸ್ತೂರು ಹೊಸಹಳ್ಳಿ, ಕೆ.ಸತ್ಯವಾರ, ಎನ್. ಹೊಸಹಳ್ಳಿ, ಕೊರಟಿ, ಹುಳವನಹಳ್ಳಿ ಹಾಗೂ ಚೊಕ್ಕಸಂದ್ರ ಗ್ರಾಮಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಅಟಲ್ ಭೂಜಲ ಯೋಜನೆಯಡಿ 4.5 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನಂದಗುಡಿ ಹೋಬಳಿಯ 6 ಗ್ರಾಮಗಳಲ್ಲಿ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ರಾಜ ಕಾಲುವೆ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೇ ನೀಡಿದ್ದು, ಮಳೆಗಾಲದಲ್ಲಿ ಈ ಭಾಗದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ಹೋಗಿದ್ದು, ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಸಿಗದೇ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ನಂದಗುಡಿ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನೀರಿನ ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ತಡೆಗೋಡೆ ನಿರ್ಮಿಸಿ 2.85 ಕೋಟಿ ಲೀಟರ್ ನೀರು ಸಂಗ್ರಹಿಸುವ ಸಲುವಾಗಿ ಜಲಾಶಯ ನಿರ್ಮಿಸಲಾಗುತ್ತಿದೆ. ವೆಂಗಯ್ಯನ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಸಲುವಾಗಿ ಚರ್ಚಿಸಲು ಸಣ್ಣ ನೀರಾವರಿ ಸಚಿವ ಬೋಸರಾಜು ವಿಕಾಸ ಸೌಧದಲ್ಲಿ ನಡೆಯುವ ಸಭೆಗೆ ಸೋಮವಾರ ಅಹ್ವಾನಿಸಿದ್ದು, ವೃಷಭಾವತಿ ವ್ಯಾಲಿ ದೇವನಹಳ್ಳಿ ಭಾಗದಲ್ಲಿ ನೀರು ಬರುತ್ತಿದ್ದು, ಆ ನೀರನ್ನು ಬಳೆಸಿಕೊಂಡು ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಭಾಗದ ಕೆರೆಗಳಿಗೆ ನೀರು ಹರಿಸಲು ನೀಲಿನಕ್ಷೆ ಯಾವ ರೀತಿ ತಯಾರಿಸಬೇಕೆಂಬ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ರಾಜಶೇಖರಗೌಡ, ಕೋಡಿಹಳ್ಳಿ ಸುರೇಶ್, ಕೆಪಿಸಿಸಿ ಕಾರ್ಯದರ್ಶಿ ಬಿ. ಗೋಪಾಲ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ತಾಪಂನ ಮಾಜಿ ಅಧ್ಯಕ್ಷ ಟಿ.ಎಸ್. ರಾಜಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಸಗೀರ್ ಅಹಮದ್, ಉದ್ಯಮಿಗಳಾದ ಕಲ್ಕೆರೆ ಕೆ.ಎಸ್. ಮಹದೇವಯ್ಯ, ಎಂ. ಮಂದೀಪ್ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ತಾಪಂ. ಮಾಜಿ ಸದಸ್ಯರಾದ ಬೀರಪ್ಪ, ಮನ್ಸೂರ್ ಆಲಿಖಾನ್, ನಂಜಪ್ಪ, ಗ್ರಾಪಂ. ಅಧ್ಯಕ್ಷರಾದ ಬಿಂದು ದೇವೇಗೌಡ, ವಸಂತ ಲೋಕೇಶ್, ಮುನಿವೆಂಕಟಮ್ಮ ಬಚ್ಚಪ್ಪ, ಎಸ್ಎಫ್ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ನಿರ್ದೇಶಕರಾದ ಎನ್.ಡಿ. ರಮೇಶ್, ದೊಡ್ಮನೆ ರಮೇಶ್, ಶ್ರೀನಿವಾಸ್, ಸಣ್ಣ ನೀರಾವರಿ ಇಲಾಖೆ ಎಇಇ ಮಂಜುನಾಥ್, ಜೆ.ಇ. ಕಿರಣ್ ಕುಮಾರ್, ಗ್ರಾಪಂ ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.