ಬೆಂಗಳೂರು: ಬರುವ ಏಪ್ರಿಲ್ ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಯಲಹಂಕ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಬುಧವಾರ ಅಧಿಕೃತವಾಗಿ ಪ್ರಚಾರ ಆರಂಭಿಸಿದರು.
ಬಿಜೆಪಿಯ ಸಾವಿರಾರು ಬೆಂಬಲಿಗರೊಂದಿಗೆ ಕ್ಷೇತ್ರದ ಸಾದೇನಹಳ್ಳಿಯ ಪಟಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶ್ವನಾಥ್ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದರು.
ಸಾದೇನಹಳ್ಳಿ, ಸುರದೇನುಪುರ, ಮಾರಸಂದ್ರ, ನೆಲ್ಲುಕುಂಟೆ, ಕಕ್ಕೇಹಳ್ಳಿ, ಕಡತನಮಲೆ, ಬುಡಮನಹಳ್ಳಿ, ವಿಶ್ವನಾಥಪುರ, ಶ್ರೀರಾಮನಹಳ್ಳಿ, ರಾಜಾನುಕುಂಟೆ ಸೇರಿದಂತೆ 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಲಹಂಕವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕಳೆದ ಮೂರು ಅವಧಿಯಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ಕ್ಷೇತ್ರ ಬೆಳೆದಂತೆಲ್ಲಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಅದೇ ರೀತಿ, ಯಲಹಂಕದ ವಿಸ್ತಾರ ಹೆಚ್ಚಿದ್ದು, ಇನ್ನೂ ಅನೇಕ ಅಭಿವೃದ್ಧಿ ಕಾರ್ಯ ಮಾಡಬೇಕಿದೆ. ಬಾಕಿ ಇರುವ ಕೆಲಸ ಕಾರ್ಯಗಳನ್ನು ಕೈಗೊಂಡು ಮತ್ತೊಂದು ಅವಧಿಗೆ ಕ್ಷೇತ್ರದ ಜನರ ಸೇವೆ ಮಾಡಲು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನರ ರಕ್ಷಣೆಗೆ ತಾವು ಮತ್ತು ಪಕ್ಷದ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿದ್ದೇವೆ. ಕ್ಷೇತ್ರದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಅವರಿಗೆ ಹೊಲಿಗೆ ತರಬೇತಿ, ಬ್ಯೂಟಿಶಿಯನ್ ತರಬೇತಿ ಸೇರಿದಂತೆ ಇನ್ನಿತರ ಸ್ವಯಂ ಉದ್ಯೋಗ ಮಾಡುವ ತರಬೇತಿಯನ್ನು ವಿಶ್ವವಾಣಿ ಪ್ರತಿಷ್ಠಾನದಿಂದ ನೀಡಲಾಗಿದೆ ಎಂದರು,
ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ
ವಿಶ್ವ ಮೆಚ್ಚಿದ ನಾಯಕ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಡಜನತೆಯ ಹಿತರಕ್ಷಣೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿವೆ. ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಿಂದ ಇಲ್ಲಿವರೆಗೆ ಬಡ ಕುಟುಂಬಗಳಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ರೈತರ ಹಿತಕ್ಕಾಗಿ ಕೃಷಿ ಸಮ್ಮಾನ್, ಭಾಗ್ಯಲಕ್ಷ್ಮಿ ಯೋಜನೆ, ಅಂಗವಿಕಲರಿಗೆ ಮಾಸಾಶನ ಹೆಚ್ಚಳ ಸೇರಿದಂತೆ ಹತ್ತು ಹಲವಾರು ಯೋಜನೆಗಳನ್ನು ನೀಡಿರುವ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಈ ಕಾರ್ಯಕ್ರಮಗಳಿಂದಾಗಿ ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.
ಯಲಹಂಕದ ಮಣ್ಣಿನ ಮಗ
70 ವರ್ಷಗಳಿಗೂ ಅಧಿಕ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಬಡವರು, ದೀನದಲಿತರು, ರೈತರು, ಹಿಂದುಳಿದವರನ್ನು ದಶಕಗಳ ಹಿಂದೆ ಸ್ಥಿತಿಯಲ್ಲೇ ಇರುವಂತೆ ಮಾಡಿತ್ತು. ಆದರೆ, ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ವರ್ಗಗಳ ಜನರನ್ನು ಆರ್ಥಿಕ ಸಂಕಷ್ಟದಿಂದ ಪಾರಾಗುವಂತಹ ಕಾರ್ಯಕ್ರಮಗಳನ್ನು ನೀಡಿದೆ ಎಂದು ತಿಳಿಸಿದರು.
ಇನ್ನೇನು ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ವಲಸಿಗ ಅಭ್ಯರ್ಥಿಗಳು ಮತ ಯಾಚನೆ ಮಾಡಲು ಬರಲಿದ್ದಾರೆ. ಚುನಾವಣೆ ಬಳಿಕ ಅವರು ಎಂದಿಗೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಮೂರು ಬಾರಿ ಶಾಸಕನಾಗಿ ಜನತೆಯಿಂದ ಆಯ್ಕೆಯಾಗಿ ಬಂದಿರುವ ನಾನು ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತರುವ ಮೂಲಕ ಯಲಹಂಕ ಕ್ಷೇತ್ರವನ್ನು ಅಭಿವೃದ್ಧಿಪಥದೆಡೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದು, ಈ ಕ್ಷೇತ್ರದ ಮಣ್ಣಿನ ಮಗನಾಗಿದ್ದೇನೆ ಎಂದು ತಿಳಿಸಿದರು.