ಸುದ್ದಿಮೂಲ ವಾರ್ತೆ
ತುಮಕೂರು,ಜೂ.19: ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲಾ ಕ್ರಷರ್ ಮಾಲೀಕರು ಕಂಟ್ರೋಲ್ ಬ್ಲಾಸ್ಟಿಂಗ್ ಸಿಸ್ಟಮ್ ಅಳವಡಿಸಿಕೊಳ್ಳಲು ಶಾಸಕ ಬಿ.ಸುರೇಶಗೌಡ ಸೂಚಿಸಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಕ್ರಷರ್ ಮತ್ತು ಗ್ರಾನೈಟ್ ಕ್ವಾರಿಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಗಣಿಗಳಲ್ಲಿ ಬ್ಲಾಸ್ಟ್ ಮಾಡುವುದರಿಂದ ಮನೆಗಳು ಬಿರುಕು ಬಿಡುವುದು ಸಾಮಾನ್ಯವಾಗಿದೆ. ಹಾಗಾಗಿ ಇಲಾಖೆಯ ನಿಯಮದಂತೆ ಕಂಟ್ರೋಲ್ ಬ್ಲಾಸ್ಟಿಂಗ್ ಅಳವಡಿಸಿಕೊಂಡರೆ, ಬಡವರು ತೊಂದರೆಗೆ ಒಳಗಾಗುವುದು ತಪ್ಪುತ್ತದೆ ಎಂದರು.
ಗಣಿ ಮತ್ತು ಕ್ರಷರ್ನಿಂದ ಮನೆ ಬಿರುಕು ಬಿಡುವುದಲ್ಲದೆ, ರಸ್ತೆಗಳು ಹಾಳಾಗುವುದು, ಗಣಿ ಧೂಳಿನಿಂದ ಅಕ್ಕಪಕ್ಕದ ಹೊಲ, ಗದ್ದೆಗಳಲ್ಲಿ ಬೆಳೆದ ಬೆಳೆಗಳ ಮೇಲೆ ಕಲ್ಲಿನ ಧೂಳಿನ ಕಣಗಳು ಕುಳಿತು ದನಕರುಗಳು ಹುಲ್ಲು ತಿನ್ನದಂತಹ ಪರಿಸ್ಥಿತಿ ಇದೆ. ಅಲ್ಲದೆ, ಹತ್ತಾರು ಟನ್ ತುಂಬಿದ ಲಾರಿಗಳು ಗ್ರಾಮೀಣ ರಸ್ತೆಗಳಲ್ಲಿ ಓಡಾಡಿ ರಸ್ತೆ ಹಾಳಾಗಿರುವ ದೂರು ಸಾಮಾನ್ಯವಾಗಿದೆ .ಈ ನಿಟ್ಟಿನಲ್ಲಿ ಕ್ರಷರ್ ಮತ್ತು ಗ್ರಾನೈಟ್ ಮಾಲೀಕರು ಹೆಚ್ಚಿನ ಗಮನ ಹರಿಸಬೇಕು. ಬಡವರು, ರೈತರು ಬದುಕುವಂತಹ ವಾತಾವರಣವನ್ನು ನೀವೇ ಸೃಷ್ಟಿಸಿಕೊಡುವಂತೆ ಸಲಹೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತೀಚಗೆ ಹೊರಡಿಸಿರುವ ಖನಿಜ ಸಾಗಿಸುವ ಎಲ್ಲಾ ವಾಹನಗಳಿಗೆ ಜಿ.ಪಿ.ಎಸ್. ಅಳವಡಿಸುವಂತೆ ಹೊರಡಿಸಿರುವ ಆದೇಶವನ್ನು ರದ್ದು ಮಾಡಲು ಸದನದಲ್ಲಿ ಒತ್ತಾಯ ಮಾಡಲಾಗುವುದು ಎಂದು ಶಾಸಕ ಸುರೇಶಗೌಡ ಭರವಸೆ ನೀಡಿದರು.
ಜಿಲ್ಲಾ ಖನಿಜ ನಿಧಿಯನ್ನು ಗಣಿ ಭಾದಿತ ಪ್ರದೇಶಗಳಲ್ಲಿ ಮಾತ್ರ ಬಳಕೆ ಮಾಡಿ, ಅಭಿವೃದ್ದಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ, ನಮ್ಮ ತಾಲೂಕಿನಿಂದ ಸಂಗ್ರಹವಾದ ಹಣವನ್ನು ನಮ್ಮ ತಾಲೂಕಿನ ರಸ್ತೆ, ಕೆರೆ ಕಟ್ಟೆ, ಶಾಲಾ, ಕಾಲೇಜು ಅಭಿವೃದ್ದಿ,ಕುಡಿಯುವ ನೀರಿಗೆ ಬಳಕೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಕೇಂದ್ರ ಸರಕಾರದಿಂದ ವಸಂತ ನರಸಾಪುರ ಕೈಗಾರಿಕಾ ವಲಯದಿಂದ ಬಾಂಬೆ ವರೆಗೆ ಕೈಗಾರಿಕಾ ಕಾರಿಡಾರ್ ಆರಂಭವಾಗಿದ್ದು, ಎಲ್.ಎನ್.ಟಿ.ಕಂಪನಿ ಗುತ್ತಿಗೆ ಪಡೆದಿದೆ. ಈ ಸಂಸ್ಥೆ ಸ್ವತಃ ಕ್ರಷರ್ ತೆರೆಯದೆ ಸ್ಥಳೀಯ ಕ್ರಷರ್ಗಳಿಂದ ಕಚ್ಚಾವಸ್ತು ಖರೀದಿಸುವಂತೆ ಮನವಿ ಮಾಡಲಾಗುವುದು. ಸುಮಾರು 2000 ಕೋಟಿ ರೂಗಳ ಯೋಜನೆ ಆರಂಭಗೊಂಡರೆ, ವ್ಯಾಪಾರವಿಲ್ಲದೆ ಸೊರಗಿರುವ ಕ್ರಷರ್ಗಳಿಗೆ ಒಂದಷ್ಟು ವಹಿವಾಟು ನಡಸಲು ಸಾಧ್ಯವಾಗುತ್ತದೆ ಎಂದು ಬಿ.ಸುರೇಶಗೌಡ ತಿಳಿಸಿದರು.
ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷೆ ಆಶಾಪ್ರಸನ್ನಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಎಂಬುದಿಲ್ಲ. ನಮ್ಮ ಆದಾಯದ ಶೇ3.0ರಷ್ಟನ್ನು ಜಿಲ್ಲಾ ಖನಿಜ ನಿಧಿಗೆ ಸಲ್ಲಿಸುತ್ತಿದ್ದೇವೆ. ಭಾದಿತ ಪ್ರದೇಶಗಳಿಗೆ ಈ ಹಣದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ 2023ರ ಜೂನ್ 30ರೊಳಗೆ ಖನಿಜ ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಆದೇಶ ಹೊರಡಿಸಿದೆ. ಇಡೀ ದೇಶದಲ್ಲಿಯೇ ಈ ವ್ಯವಸ್ಥೆ ಜಾರಿಯಿಲ್ಲ. ಕರ್ನಾಟಕದಲ್ಲಿ ಮಾತ್ರ ಇದೆ.ಅದನ್ನು ರದ್ದು ಪಡಿಸುವಂತೆ ಒತ್ತಾಯಿಸಿದರು.
ಹಿಂದಿನ ಸರಕಾರದಲ್ಲಿ ಕ್ರಷರ್ ಮಾಲೀಕರ 23 ಮತ್ತು ಗ್ರಾನೈಟ್ ಮಾಲೀಕರ 4 ಬೇಡಿಕೆಗಳನ್ನು ಕ್ರಷರ್ ತಿದ್ದುಪಡಿ ಮಸೂದೆಯಲ್ಲಿ ಅಂಗೀಕರಿಸಿದೆ.ಆದರೆ ಜಾರಿಯಾಗಿಲ್ಲ.ಇದನ್ನು ಜಾರಿಗೆ ತರಲು ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಕ್ರಷರ್ ಮತ್ತು ಗ್ರಾನೈಟ್ ಪರವಾಗಿ ಸದನದಲ್ಲಿ ದ್ವನಿ ಎತ್ತುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಭೂ ವಿಜ್ಞಾನಿಗಳಾದ ನಾಗರಾಜು,ಸಂತೋಷಕುಮಾರ್ ಉಪಸ್ಥಿತರಿದ್ದರು. ತುಮಕೂರು ತಾಲೂಕಿನ ಮೂವತ್ತಕ್ಕೂ ಹೆಚ್ಚು ಕ್ರಷರ್ ಮತ್ತು ಗ್ರಾನೈಟ್ ಕಂಪನಿಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.