ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.13: ಸಚಿವರೂ ಆದ ಶಾಸಕ ಡಾ.ಸಿಎನ್ ಅಶ್ವತ್ಥನಾರಾಯಣ ಅವರು ಗುರುವಾರ ಬೆಳಿಗ್ಗೆ ಕಾಡುಮಲ್ಲೇಶ್ವರ ಹಾಗೂ ಆಸುಪಾಸಿನ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ ಮತ ಕೋರಿದರು.
ಈಜುಕೊಳ ಬಡಾವಣೆ, ದೋಬಿಘಾಟ್ ರಸ್ತೆ, ವೈಯಾಲಿಕಾವಲ್, ಚೌಡಯ್ಯ ರಸ್ತೆ ಪ್ರದೇಶಗಳಲ್ಲಿ ಅವರು ಸಂಚರಿಸಿದರು. ಮನೆಮನೆಗೆ ತೆರಳುವ ಜೊತೆಗೆ ಅಂಗಡಿ ಮುಂಗಟ್ಟುಗಳ ಮಾಲೀಕರನ್ನು ಮಾತನಾಡಿಸಿ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ಆಲಿಸಿದರು. ಮಕ್ಕಳಾದಿಯಾಗಿ ಎಲ್ಲಾ ವಯೋಮಾನದ ಜನರನ್ನು ಸಚಿವರು ಮಾತನಾಡಿಸಿದರು.
ಶಾಸಕರು ಪಾದಯಾತ್ರೆ ನಡೆಸುವಾಗ ಮಾರ್ಗಮಧ್ಯೆ ಕೆಲವರು ಹೂವಿನ ಪಕಳೆಗಳನ್ನು ಸುರಿಸಿದರು. ಇನ್ನು ಕೆಲವರು, ಶಾಸಕರಿಗೆ ಕುಂಕುಮಯಿಟ್ಟು ಆರತಿ ಬೆಳಗಿ ಶುಭಕೋರಿದರು. ಇದೇ ವೇಳೆ, ಕೆಲವೆಡೆ ಸಿಹಿ ಹಂಚಿಕೆ ಕೂಡ ನಡೆಯಿತು.
ಪಾಲಿಕೆ ಮಾಜಿ ಸದಸ್ಯ ಮಂಜುನಾಥರಾಜು ಮತ್ತಿತರ ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.