ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಮೇ 22: ಕರ್ನಾಟಕ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿರುವ 5 ವಾಗ್ದಾನವನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಎನ್.ಎಸ್.ಯು.ಐ ಘಟಕದ ಮಾಜಿ ಅಧ್ಯಕ್ಷ ಮಳ್ಳೂರಿನ ಎಂ.ಎನ್.ಪ್ರಜ್ವಲ್(ಲಿಕ್ಕಿ) ಹೇಳಿದರು.
ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ರಾಜ್ಯದ ಜನತೆಗೆ ಚುನಾವಣಾಪೂರ್ವ ನೀಡಿದ್ದ5 ವಾಗ್ದಾನಗಳನ್ನು ಸಚಿವ ಸಂಪುಟದ ಪ್ರಥಮ ಸಭೆಯಲ್ಲಿ ಅದಕ್ಕೆ ಅನುಮೋದನೆ ನೀಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂದು ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೂ ಬೆಳಕು ಕಲ್ಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ನೀಡಲು ಸಂಪುಟದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಅದೇ ರೀತಿ ಮಹಿಳೆಯರಿಗೆ ಸರಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಸಹ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.
ಹಾಗೆಯೇ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಲು ಅನುಮೋದನೆ ನೀಡಲಾಗಿದೆ. ನಿರುದ್ಯೋಗಿ ಯುವ ಜನರಿಗೆ ಯುವನಿಧಿ ಯೋಜನೆಯಡಿ ಮಾಸಿಕ 3 ಸಾವಿರ ಹಾಗೂ ಡಿಪ್ಲೊಮಾ ಪದವಿಧರ ನಿರುದ್ಯೋಗಿಗಳಿಗೆ ಎರಡು ವರ್ಷದವರಿಗೆ 1500 ರೂಗಳ ನಿರುದ್ಯೋಗಿ ಭತ್ಯವನ್ನು ನೀಡಲು ಅನುಮೋದನೆ ಕಲ್ಪಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ಸಹಾಯಧನ ನೀಡಲು ಅನುಮೋದನೆ ನೀಡಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಶೈಕ್ಷಣಿಕ ಕೇಂದ್ರ ಮಾಡಲು ಈಗಾಗಲೇ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ಮತ್ತು ಪ್ರೋತ್ಸಾಹ ನೀಡಲು ಯೋಜನೆಯನ್ನು ರೂಪಿಸಲಾಗಿದೆ ಕಾಂಗ್ರೆಸ್ ಸರ್ಕಾರ ರೈತರು, ಕೂಲಿ ಕಾರ್ಮಿಕರು, ಬಡವರು, ಮಹಿಳೆಯರು,ಯುವಕ-ಯುವತಿಯರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಮೂಲಕ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.