ಸುದ್ದಿಮೂಲ ವಾರ್ತೆ
ಕುಷ್ಟಗಿ,ಜು.24:ಕುಷ್ಟಗಿ ಪಟ್ಟಣದಲ್ಲಿ ರಾತ್ರಿ ಮೊಬೈಲ್ ಅಂಗಡಿಯ ಸಟ್ರಸ್ ಮುರಿದು ಲಕ್ಷಾಂತರ ರೂ. ಬೆಲೆ ಬಾಳುವ ಮೊಬೈಲ್ ಹಾಗೂ ಬಿಡಿ ಸಾಮಗ್ರಿಗಳನ್ನು ಕಳ್ಳತನವಾದ ಘಟನೆ ಸೋಮವಾರ ಬೆಳಗಿನಜಾವ ನಡೆದಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತಿ ವೃತ್ತದ ಬಳಿ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣದಲ್ಲಿರುವ ಅವಿನಾಶ ಕೋರಾ ಎಂಬುವರಿಗೆ ಸೇರಿದ ಮೊಬೈಲ್ ಶಾಪ್ ಇದಾಗಿದೆ.
ಶಾಪಿನ ಶಟರ್ಸ್ ಮೀಟಿ ಒಳನುಗ್ಗಿದ ಕಳ್ಳರು, ಬೆಲೆ ಬಾಳುವ ವಿವಿಧ ಕಂಪನಿಯ ಮೊಬೈಲ್’ಗಳು, ಪವರ್ ಬ್ಯಾಂಕ್, ಬ್ಯಾಟರಿ ಚಾರ್ಜರ್, ಕೇಬಲ್ ಸೇರಿದಂತೆ ಇತರೆ ಮೊಬೈಲ್ ಬಿಡಿ ಸಾಮಗ್ರಿಗಳು ಹಾಗೂ ಚಿಲ್ಲರೆ ಹಣವನ್ನು ದೋಚಿದ್ದಾರೆ. ಒಳಗೆ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ಕಿತ್ತು ಹಾಕಿದ್ದಾರೆ. ಅಂದಾಜು 35 ರಿಂದ 40 ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಶಾಪ್ ಮಾಲೀಕರು ಅಂದಾಜಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನ ಆತಂಕ: ಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ ಘಟನೆಗಳು ಹೆಚ್ಚುತ್ತಿದ್ದು, ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಹೊರವಲಯ ಅಲ್ಲದೆ ಒಳ ಪ್ರದೇಶದಲ್ಲಿ ಹಗಲು – ರಾತ್ರಿ ಎನ್ನದೇ ಮನೆ, ಅಂಗಡಿಗಳ ಕಳ್ಳತನ ಘಟನೆಗಳು ಜರುಗುತ್ತಲೇ ಇವೆ. ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಳ್ಳತನ ಘಟನೆಗಳು ಜರುಗದಂತೆ ಸೂಕ್ತ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.