ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.1: ಹಲವೆಡೆ ಭಾರಿ ಮಳೆ ಆರಂಭವಾಗಿದ್ದು, ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆ ಅನುಭವಿಸಿದ್ದ ರಾಜ್ಯಕ್ಕೆ ಸೆಪ್ಟಂಬರ್ನಲ್ಲಿ ಉತ್ತಮ ಮಳೆಯ ಮುನ್ಸೂಚನೆ ನೀಡಲಾಗಿದೆ.
ಗುರುವಾರ ಮತ್ತು ಶುಕ್ರವಾರ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಗುಡುಗು, ಮಿಂಚು ಸಹಿತ ಅಬ್ಬರದ ಮಳೆ ಬೀಳುತ್ತಿರುವುದರಿಂದ ರೈತರಲ್ಲಿ ಮತ್ತೆ ಭರವಸೆ ಮೂಡಿಸಿದೆ.
ರಾಜ್ಯದಲ್ಲಿ ನೈರುತ್ಯ ಮುಂಗಾರು ಮತ್ತೆ ಚುರುಕಾಗಿದೆ. ಹೀಗಾಗಿ ಮುಂದಿನ ಆರು ದಿನಗಳವರೆಗೆ ಹಲವೆಡೆ ಭಾರಿ ಮಳೆ ಬೀಳಲಿದೆ. ಬೆಂಗಳೂರು ಸಹಿತ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ, ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಸಾಮಾನ್ಯ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆನೀಡಿದೆ.