ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.20: ಬೆಂಗಳೂರಿನಲ್ಲಿ ಒಂದೇ ಸಮನೇ ಸುರಿತ್ತಿರುವ ಮಳೆ ಬಿಪರ್ಜಾಯ್ ಚಂಡಮಾರುತದ ಕಾರಣ ದುರ್ಬಲಗೊಂಡಿದ್ದ ಮುಂಗಾರು ಇಂದಿನಿಂದ ಚುರುಕು ಪಡೆಯುತ್ತಿದೆ.
ಬೆಂಗಳೂರಿನಲ್ಲಿ ಬೆಳಗ್ಗಿನ ಜಾವದಿಂದಲೂ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ನಗರದ ಸುತ್ತಮುತ್ತಲಿನ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ವರುಣ ಅಬ್ಬರಿಸುವ ಸಂಭವ ಇದೆ. ಕೋಲಾರ ಜಿಲ್ಲೆಯಲ್ಲಿ ರಾತ್ರಿಯಿಂದಲೇ ಮಳೆಯಾಗುತ್ತಿದೆ.
ಇನ್ನೂ ಬೆಂಗಳೂರಿನ ಹಲವು ಕಡೆಗಳಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಶಿವಾಜಿನಗರ, ಎಂಜಿ ರೋಡ್, ಕಾರ್ಪೊರೇಷನ್, ಮಾರುಕಟ್ಟೆ ಸುತ್ತಮುತ್ತ ಮಳೆಯಾಗುತ್ತಿದೆ. ಜಿಟಿಜಿಟಿಯಾಗಿ ಬೀಳ್ತಾ ಇದ್ದ ಮಳೆ ದಿಢೀರಾಗಿ ಜೋರಾಗುತ್ತಿದೆ. ಕಿಲೋಮೀಟರ್ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ.
ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಗುಡುಗು ಮಿಂಚಿನ ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.