ಸುದ್ದಿಮೂಲ ವಾರ್ತೆ
ಬೆಂಗಳೂರು, ಅ, 1 : ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನದ ಅಂಗವಾಗಿ ಆಯೋಜಿಸಿದ್ದ ಹಿರಿಯರ ಹಬ್ಬದಲ್ಲಿ 2,500 ಕ್ಕೂ ಅಧಿಕ ಅಜ್ಜ- ಅಜ್ಜಿಯರು ಭಾಗಿಯಾಗಿದ್ದರು.
ವಯೋವಿಕಾಸ ಸಂಸ್ಥೆಯಿಂದ ನಗರದ ಸೇಂಟ್ ಜೋಸೆಫ್ ಇನ್ಟ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜು ಆವರಣದಲ್ಲಿ ಹಿರಿಯರ ಹಬ್ಬ ನಡೆಯಿತು. ಹಿರಿಯ ನಾಗರಿಕರ ಬ್ರ್ಯಾಂಡ್ ರಾಯಭಾರಿ, ಚಲನಚಿತ್ರ ನಟ ಸಿಹಿ ಕಹಿ ಚಂದ್ರು ಮತ್ತು ವಯೋ ವಿಕಾಸ್ ಸಂಸ್ಥೆಯ ಮಂಡಳಿ ಸದಸ್ಯ ಡಾ. ಅಲೆಕ್ಸಾಂಡರ್ ಥಾಮಸ್ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ನಾಗರಿಕರು ಕುಣಿದು ಕುಪ್ಪಳಿಸಿದರು. ಹಾಸ್ಯ ಸಮ್ಮೇಳನ, ಶಂಕರ್ ಮಹಾದೇವನ್ ಅಕಾಡೆಮಿಯಿಂದ ಸಂಗೀತಗೋಷ್ಠಿ ಆಯೋಜಿಸಲಾಗಿತ್ತು. ಹಿರಿಯ ನಾಗರಿಕರು ಅಡುಗೆ ಸ್ಪರ್ಧೆಗಳಲ್ಲಿ ಭಾಗಿಯಾಗಿ ತಮ್ಮ ಕೈಚಳಕ ತೋರಿದರು. ಸಿಹಿಕಹಿ ಚಂದ್ರು ಹಿರಿಯರಲ್ಲಿ ಹಿರಿಯರಾಗಿ ಎಲ್ಲರ ಜೊತೆ ಬೆರತು ಸಂಭ್ರಮಿಸಿದರು.
ಕಾಶ್ಮೀರದಿಂದ ಹಿಡಿದು ಕನ್ಯಾ ಕುಮಾರಿ ವರೆಗೆ ಹಿರಿಯ ನಾಗರಿಕರು ಭಾಗಿಯಾಗಿದ್ದರು. ಆನ್ ಲೈನ್ ನಲ್ಲಿ 1500 ಕ್ಕೂ ಹೆಚ್ಚಿನ ಜನ ನೊಂದಣಿ ಮಾಡಿಕೊಂಡಿದ್ದರು. ವಯೋ ವಿಕಾಸ್ ಸಂಸ್ಥೆ ಸಿ.ಓ.ಓ. ಪವಿತ್ರ ರೆಡ್ಡಿ ಮಾತನಾಡಿ, ಹಿರಿಯ ನಾಗಕರನ್ನು ಸಮಾಜದಲ್ಲಿ ಗೌರವಯುತವಾಗಿ ನೋಡಿಕೊಳ್ಳುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ, ಅವರದೇ ಆದ ಮೋಜು – ಮಸ್ತಿಯಲ್ಲಿ ಕುಣಿದು ಕುಪ್ಪಳಿಸಲು ಈ ಹಬ್ಬ ಆಚರಿಸಲಾಯಿತು. ಹಿರಿಯರಿಗೆ ಜ್ಞಾನ-ಹಂಚಿಕೆಯ ವಿಚಾರಗೋಷ್ಠಿಗಳು, ಆರೋಗ್ಯ ಪ್ರದರ್ಶನಗಳು, ದೈಹಿಕ ಸದೃಢತೆಯ ಪ್ರಾತ್ಯಕ್ಷಿಕೆಗಳು, ಮನೋರಂಜನಾ ಪ್ರದರ್ಶನಗಳು ನಡೆದವು ಎಂದರು.
ಮಾಹಿತಿ ತಂತ್ರಜ್ಞಾನ ದಿಗ್ಗಜ ಕ್ರಿಸ್ ಗೋಪಾಲ ಕೃಷ್ಣನ್, ಹೃದಯ ತಜ್ಞ ಡಾ. ದೇವಿ ಶೆಟ್ಟಿ, ವಯೋ ವಿಕಾಸ್ ಸಂಸ್ಥೆಯ ಸಿ.ಇ.ಓ ಜಮುನ ರವಿ ಮತ್ತು ಅಂತರ ಸಿನೀಯರ್ ಕೇರ್ ಸಂಸ್ಥೆಯ ರೋಹಿತ್ ಕಟು ಮತ್ತಿತರರು ಈ ಹಬ್ಬಕ್ಕೆ ಸಾಕ್ಷಿಯಾದರು.