ಸುದ್ದಿಮೂಲ ವಾರ್ತೆ
ರಾಮನಗರ,ಜೂ.17: ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು. ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇಲಾಖಾವಾರು ಪ್ರಗತಿ ಪರಿಶೀಲನೆ ವೇಳೆ ರಾಮನಗರ ನಗರಸಭೆಯ ಕಮೀಷನರ್ ನಾಗೇಶ್ ಅವರನ್ನು ನೀವು ಕಮೀಷನರ್ ತರಹ ಕಾರ್ಯನಿರ್ಹಿಸಿ ಎಂದು ಆದೇಶಿಸಿದರು. ಜಿಲ್ಲಾ ನಗರಾಭಿವೃದ್ದಿ ಕೋಶದಲ್ಲಿ 15ನೇ ಹಣಕಾಸಿನ ಯೋಜನೆಗೆ ಸಂಬಂಧಿಸಿದಂತೆ ಸಮಪರ್ಕವಾಗಿ ಉತ್ತರ ನೀಡದಿದ್ದರಿಂದ ಕುಪಿತರಾದ ಡಿ.ಕೆ.ಸುರೇಶ್, ಪೌರಾಯುಕ್ತರಿಗೆ ನೋಟಿಸ್ ಜಾರಿ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟರು.
ಚನ್ನಪಟ್ಟಣ ಕೃಷಿ ಮಹಿಳಾ ಅಧಿಕಾರಿಯನ್ನುತರಾಟೆಗೆ ತೆಗೆದುಕೊಂಡರು. ನೀವು ಫೀಲ್ಡ್ ನಲ್ಲಿದ್ದು ಹೆಚ್ಚು ಕೆಲಸ ಮಾಡಬೇಕು ಎಂದರು.
ಯೋಜನೆಗಳ ಫಲಿತಾಂಶ ಏನು?
ಸರ್ಕಾರ ಇಲಾಖಾವಾರು ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುತ್ತದೆ. ಅನುದಾನದ ಖರ್ಚನ್ನು ಕೂಡಿ ಕಳೆಯಲಾಗುತ್ತಿದೆ ಹೊರತು ಯೋಜನೆಗಳ ಫಲಿತಾಂಶ ಸಿಗುತ್ತಿಲ್ಲ. ಹೀಗಾಗಿ ಮುಂದಿನ ಸಭೆಯಲ್ಲಿ ಇಲಾಖಾವಾರು ಯೋಜನೆಗಳ ಫಲಿತಾಂಶದ ಸಮಗ್ರ ವರದಿ ಸಲ್ಲಿಸಿ ಎಂದು ಸೂಚಿಸಿದರು.
ಸರ್ಕಾರದ ಯೋಜನೆಗಳು ಅನುಷ್ಠಾನಗೊಂಡ ನಂತರ ಯಾವ ಯೋಜನೆಯಿಂದ ಯರ್ಯಾರಿಗೆ ಅನುಕೂಲವಾಗಿದೆ. ಎಷ್ಟು ಪ್ರಗತಿ ಸಾಧ್ಯವಾಗಿದೆ ಎಂಬುದನ್ನು ತಿಳಿಯಬೇಕಾಗಿದೆ ಎಂದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಹಲವಾರು ಯೋಜನೆಗಳಿವೆ. ಸಬ್ಸಿಡಿ ತೆಗೆದುಕೊಳ್ಳಲು ಇರುವ ಯೋಜನೆಗಳೇ ಎಂಬ ಅನುಮಾನ ಕಾಡುತ್ತಿದೆ. ರೈತರು ಮತ್ತು ಜನಸಾಮಾನ್ಯರಿಗೆ ಯಾವ ಯೋಜನೆಗಳಿಂದ ಲಾಭ ಆಗುತ್ತಿದೆಯೋ ಇಲ್ಲವೋ ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ ವತಿಯಿಂದ ನಿರ್ಮಾಣವಾಗಿರುವ 12 ಚೆಕ್ ಡ್ಯಾಂಗಳ ಗುಣಮಟ್ಟದ ಪರಿಶೀಲನೆ ಮಾಡುವಂತೆ ದಿಶಾ ಸದಸ್ಯರಿಗೆ ಸೂಚನೆ ಕೊಟ್ಟರು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ ಎಲ್ಲಾ 1.20 ಲಕ್ಷ ರೈತರು ಲಾಭ ಪಡೆಯುವಂತಾಗಬೇಕು. ಪೌತಿ ಖಾತೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರು, ಬಗೆಹರಿಸಲು ಕ್ರಮ ವಹಿಸಬೇಕು. 15 ದಿನದೊಳಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒರವರು ಗ್ರಾಪಂ, ಕಂದಾಯ, ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆ ಒಳಗೊಂಡಂತೆ ವಿಶೇಷ ಅಭಿಯಾನ ಮಾಡಿ ಸಮಸ್ಯೆ ಇದ್ದರೆ ಬಗೆಹರಿಸಿ ಎಂದು ಸಲಹೆ ಕೊಟ್ಟರು.
ಕೊಳ್ಳೇಗಾಲದ ರೇಷ್ಮೆ ಮಾರುಕಟ್ಟೆಯಲ್ಲಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಕಿರುಕುಳ ಆಗುತ್ತಿದೆ ಎಂಬ ದೂರುಗಳಿವೆ, ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಅವರು ತಕ್ಷಣ ಆ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿ ಜಿಲ್ಲೆಯ ರೈತರಿಗೆ ರಕ್ಷಣೆ ಕೊಡಿ ಎಂದು ಸೂಚಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದಾಗಿ ಉಪನಿರ್ದೇಶಕರು ಗಮನ ಸೆಳೆದಾಗ ಸಂಬಂಧಿಸಿದ ಇಲಾಖೆಯ ಸಚಿವರ ಬಳಿ ಚರ್ಚಿಸುವುದಾಗಿ ಡಿ.ಕೆ.ಸುರೇಶ್ ತಿಳಿಸಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ, ರೇಷ್ಮೆ, ನರೇಗಾ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಅನುಷ್ಠಾನಗೊಂಡಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಂಕಿ ಅಂಶ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ರವಿ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ ಮತ್ತಿತರರು ಉಪಸ್ಥಿತರಿದ್ದರು.