ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 4: ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ರಾಜಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಕ್ಷೇತ್ರದಲ್ಲಿ ವಿವಿಧಡೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಇಂದು ರಾಜಾಜಿನಗರ ಕ್ಷೇತ್ರದ ಪ್ರಕಾಶ್ ನಗರ ಹಾಗೂ ದಯಾನಂದ ನಗರ ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಪುಟ್ಟಣ್ಣ ಅವರಿಗೆ ತಮಿಳುನಾಡಿನ ಚಿದಂಬರಂ ಕ್ಷೇತ್ರದ ಸಂಸದ ತೊಲ್ ತಿರುಮಾವಳನ್ ಸಾಥ್ ನೀಡಿದ್ದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ರಾಜಾಜಿನಗರದ ಜನರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ತಮಿಳುನಾಡಿನ ಸಂಸದ ತೊಲ್ ತಿರುಮಾವಳನ್, ಅಭಿವೃದ್ಧಿಗೆ ಪುಟ್ಟಣ್ಣ ಶ್ರಮವಹಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಕೆಲಸ ಮಾಡುತ್ತಾರೆ. ಈ ಬಾರಿ ಪುಟ್ಟಣ್ಣನಿಗೆ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಮತ ಪ್ರಚಾರದ ವೇಳೆ ನಾಗರಿಕರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಪುಟ್ಟಣ್ಣ , ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಹಾಲಿ ಶಾಸಕರು ಗೊಡ್ಡು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ ಮೂಲಸೌಕರ್ಯ ಸಮಸ್ಯೆಗಳು ಸಾಕಷ್ಟಿವೆ. ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ, ನಡೆದರೂ ಗುಣಮಟ್ಟದಿಂದ ಕಾಮಗಾರಿಗಳನ್ನು ನಡೆಸಿಲ್ಲ. ಕ್ಷೇತ್ರದಲ್ಲಿ ಬದಲಾವಣೆಯ ಅಲೆ ಬೀಸುತ್ತಿದೆ. ಅಭಿವೃದ್ಧಿಗಾಗಿ ತಮಗೆ ಬೆಂಬಲ ನೀಡಬೇಕು ಬದಲಾವಣೆಗೆ ಒಂದು ಅವಕಾಶ ಮಾಡಿಕೊಂಡುವಂತೆ ಜನರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿಯ ಮಾಜಿ ಮೇಯರ್ ಜಿ. ಪದ್ಮಾವತಿ, ಮಾಜಿ ಸದಸ್ಯ ಪಳನಿಕಾಂತ್, ಕಾಂಗ್ರೆಸ್
ಮುಖಂಡರಾದ ಮಂಜುಳಾ ನಾಯ್ಡು ಮತ್ತಿತರರು ಇದ್ದರು. ಪ್ರಚಾರದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಸುರೇಶ್ ಕುಮಾರ್ ವಿರುದ್ಧ ಘೋಷಣೆ
ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಕ್ಷೇತ್ರದ ಅಬ್ಬರದ ಪ್ರಚಾರದ ವೇಳೆ ಹಾಲಿ ಶಾಸಕ ಸುರೇಶ್ ಕುಮಾರ್ ವಿರುದ್ಧ ಘೋಷಣೆ ಕೇಳಿಬಂತು. ಕಳೆದ 20 ವರ್ಷಗಳಿಂದ ಹಾಲಿ ಶಾಸಕ ಸುರೇಶ್ ಕುಮಾರ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಚುನಾವಣೆ ವೇಳೆ ಮಾತ್ರ ಮತ ಕೇಳಲು ಬರುತ್ತಾರೆ. ಆದರೆ, ರಾಜಾಜಿನಗರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಸುರೇಶ್ ಕುಮಾರ್ಗೆ ಕ್ಷೇತ್ರದ ಜನರು ಧಿಕ್ಕಾರ ಕೂಗಿದ ಪ್ರಸಂಗ ಸಹ ನಡೆಯಿತು.