ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.13: ಕಾರ್ಪೋರೇಟ್ ಸಂಸ್ಥೆಗಳ ಏಜಂಟರಂತೆ ವರ್ತಿಸುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರ ಕಚೇರಿಗೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಇಂದು ಮುತ್ತಿಗೆ ಹಾಕಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಬಡ ಚಾಲಕರ ಬದುಕಿಗೆ ಕೊಳ್ಳಿ ಇಡುತ್ತಿರುವ ಸಾರಿಗೆ ವಲಯದ ಕಾರ್ಪೋರೆಟ್ ಸಂಸ್ಥೆಗಳ ಪರವಾಗಿ ವಕಾಲತ್ತು ವಹಿಸುತ್ತಿರುವ ತೇಜಸ್ವಿ ಸೂರ್ಯ ಅವರು ಕಾರ್ ಪೂಲಿಂಗ್ ಕುರಿತು ನೀಡಿದ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು. ಕಾರ್ ಪೂಲಿಂಗ್ಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ತಕ್ಷಣ ವಾಪಸ್ ಪಡೆಬಯಬೇಕು. ಇಲ್ಲವಾದಲ್ಲಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರರು ಒತ್ತಾಯಿಸಿದರು.
ಸಂಸದರು ಕಚೇರಿಯಲ್ಲಿ ಇಲ್ಲದ ಕಾರಣ, ಜಯನಗರ ಶಾಸಕ ರಾಮಮೂರ್ತಿ ತೇಜಸ್ವಿ ಹೇಳಿಕೆ ಪರ ಬೇಷರ್ ಕ್ಷಮೆಯಾಚಿಸಿದರು. ಭಾನುವಾರ ಸಾರಿಗೆ ಸಂಘಟನಗಳ ಒಕ್ಕೂಟದ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ, ಸಂಸದರು ಭಾನುವಾರದೊಳಗೆ ಕ್ಷಮೆ ಕೇಳದಿದ್ದರೆ ಬೆಂಗಳೂರು ನಗರದಲ್ಲಿ ಸಂಚರಿಸುವ ವಾಹನಗಳ ಮೇಲೆ ದಿಕ್ಕಾರದ ಪೋಸ್ಟರ್ ಹಚ್ಚಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ. ಅದಕ್ಕೂ ಜಗ್ಗದೆ ಹೋದರೆ ಅವರ ವಿರುದ್ಧ ಸಾರಿಗೆ ಸಂಘಟನೆಯ ಒಬ್ಬ ಸದಸ್ಯರನ್ನು ಲೋಕ ಸಭಾ ಚುನಾವಣೆ ಕಣಕ್ಕೆ ಇಳಿಸಿ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ಎಲ್ಲಾ ರೀತಿಯ ರಣತಂತ್ರಗಳನ್ನು ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಪದಾಧಿಕಾರಿಗಳಾದ ನಾರಾಯಣ ಸ್ವಾಮಿ ಮತ್ತು ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಸಂಸದರು ತನ್ನ ಲೋಕಸಭಾ ಕ್ಷೇತ್ರದ ಬಡ ಜನರ ಹೊಟ್ಟೆ ಮೇಲೆ ಹೊಡೆದು ಸಾಂಸ್ಥಿಕ ಸಂಸ್ಥೆಗಳ ಪರ ನಿಂತಿರುವುದು ಚಾಲಕ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಪೋರೇಟ್ ವಲಯದಿಂದ ಲಾಭ ಪಡೆಯುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಿರಬಹುದು. ನಾವು ನಮ್ಮ ಚಾಲಕ ಸಮುದಾಯದ ಹಿತ ರಕ್ಷಣೆಗಾಗಿ ಎಂತಹ ಹೋರಾಟಕ್ಕೆ ಬೇಕಾದರೂ ಸಿದ್ಧವಾಗುತ್ತೇವೆ ಎಂದರು.
ಒಕ್ಕೂಟದ ರಘು ನಾರಾಯಣ ಗೌಡ, ಜಯಣ್ಣ, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.