ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ. 21 :ಹದೆಗೆಟ್ಟಿರುವ ರಸ್ತೆ ,ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ವಿರುದ್ದ ಸ್ಥಳೀಯ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ19 ನೇ ವಾರ್ಡಿನ ತಿಮ್ಮಯ್ಯ ಲೇಔಟ್ ನಲ್ಲಿ ಸುಮಾರು 20 ವರ್ಷದಿಂದ ರಸ್ತೆಗೆ ಸಿಸಿ ರಸ್ತೆ ಅಥವಾ ಡಾಂಬಾರು ರಸ್ತೆ ನಿರ್ಮಾಣ ಮಾಡದ ಕಾರಣ ನಗರಸಭೆಯ ಅಧಿಕಾರಿಗಳ ನಿರ್ಲಕ್ಷತನದಿಂದ ನಾಗರೀಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ದಿನ ನಿತ್ಯ ಹದಗೆಟ್ಟಿರುವ ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗಿದ್ದು , ಬಹು ಮುಖ್ಯವಾಗಿ ವಯೋ ವೃದ್ದರು ಆ ರಸ್ತೆಯಲ್ಲಿ ಓಡಾಡಲು ಹರ ಸಹಾಸ ಪಡುವಂತಾಗಿದೆ.
ಈ ಬಗ್ಗೆ ಅನೇಕ ಬಾರಿ ವಾರ್ಡಿನ ನಗರ ಸಭೆ ಸದಸ್ಯೆ ಫರೀದ್ ಉನ್ನಿಸಾ ಅವರ ಗಮನಕ್ಕೂ ತರಲಾಗಿದೆ. ನಗರಸಭೆಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿಗಳು ನೀಡಿದ್ದರೂ ಸಹ ಇದುವರೆಗೂ ನಮ್ಮ ಸಮಸ್ಯೆಗಳು ಬಗೆಹರಿಸಲಿಲ್ಲ. ಆದ್ದರಿಂದ ನಮ್ಮ ಸಮಸ್ಯೆಗಳು ಬಗೆ ಹರಿಯುವ ತನಕ ಇಲ್ಲಿಂದ ತೆರಳುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಪ್ರತಿಭಟಿಸಿದರು.
ವಾರ್ಡಿನಲ್ಲಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರಸಿಡೆಸ್ಸಿ ಖಾಸಗಿ ಶಾಲೆಗಳಿವೆ. ಈ ಮೂರು ಶಾಲೆಗಳ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ದಿನ ನಿತ್ಯ ಓಡಾಡುತ್ತಾರೆ. ಮಳೆಗಾಲದಲ್ಲಂತೂ ಬಹಳ ಅವ್ಯವಸ್ಥೆಗಳು ಪಟ್ಟು ಆ ಹದೆಗೆಟ್ಟ ರಸ್ತೆಯಲ್ಲಿ ಓಡಾಡುವಂತ ದುಸ್ಥಿತಿ ಎದುರಾಗಿದೆ.
ಇಲ್ಲಿನ ಎಲ್ಲಾ ಮನೆಯವರು ಕಾಲ ಕಾಲಕ್ಕ ನಗರಸಭೆಗೆ ಕಂದಾಯವನ್ನು ಸಹ ಕಟ್ಟುತ್ತಿದ್ದೇವೆ. ಆದರೂ ಕೂಡ ಮೂಲಭೂತ ಸೌಲಭ್ಯಗಳಿಂದ ವಂಚಿರಾಗಿದ್ದೇವೆ. ಹೀಗಿರುವಾಗ ನಗರಸಭೆ ಯಾತಕ್ಕೆ ಬೇಕಾಗಿದೆ ಎಂದು ನಗರಸಭೆಯ ವಿರುದ್ಧ ದಿಕ್ಕಾರಗಳು ಕೂಗಿ ನಗರದ ಪ್ರಮುಖ ರಸ್ತೆಯೇ ದುಸ್ಥಿತಿಯಲ್ಲಿ ಅನೇಕ ವರ್ಷಗಳಿಂದ ಇರುವಂತಾಗಿದೆ. ಆ ಹದಗೆಟ್ಟ ರಸ್ತೇಲಿ ನಾಗರೀಕರು ಓಡಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನಗರಸಭೆಯ ಪೌರಾಯುಕ್ತ ಆಂಜಿನೇಯಲು ಮಾತನಾಡಿ, ಈಗಾಗಲೇ ನಗರಕ್ಕೆ ಬಂದು ಪರಿವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮಂಜೂಳ ರವರು ಸಹ ಈ ರಸ್ತೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಇದೀಗ ತಾವು ಕೂಡ ತಮ್ಮ ಸಮಸ್ಯೆಗಳನ್ನು ತಿಳಿಸಿದ್ದೀರಿ. 19 ನೇ ವಾರ್ಡಿಗೆ ಅವರೊಂದಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ವೀಕ್ಷಣೆ ಮಾಡಿ 2 ತಿಂಗಳ ಒಳಗೆ ನಿಮ್ಮ ಬೇಡಿಕೆಗಳು ಈಡೇರಿಸುವುದಾಗಿ ಭರವಸೆ ನೀಡಿದರು. ನಂತರ ಅವರ ಭರವಸೆಯಂತೆ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ಹಾರೀಫ್, ನವಾಜ್, ಬಾಬಾ, ಝಬೀ, ಲಡ್ಡು ನಾಸೀನ್, ಬಿ.ಎ ಸೆಮಿ, ಫಾರೂಕ್, ಹಾಜಿ ಸಮೀಉಲ್ಲಾ, ಇಮ್ರಾನ್ ಹಾಗೂ ಮುಂತಾದವರು ಭಾಗವಹಿಸಿದ್ದರು.