ಸುದ್ದಿಮೂಲ ವಾರ್ತೆ
ಮಸ್ಕಿ ಏ.೦೫ :ಕಾಂಗ್ರೆಸ್ ಪಕ್ಷದ ವತಿಯಿಂದ ಘೋಷಣೆ ಮಾಡಲಾಗಿರುವ ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯನ್ನು 2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರಲಾಗುತ್ತದೆ ಎಂದು ಶಾಸಕ ಬಸನಗೌಡ ತುರುವಿಹಾಳ್ ತಿಳಿಸಿದರು.
ಪಟ್ಟಣದ 3 ಮತ್ತು 4ನೇ ವಾರ್ಡಿನಲ್ಲಿ ಭೂತ ಮಟ್ಟದ ಸಭೆ ಹಾಗೂ ಕಾಂಗ್ರೆಸ್ ಪಕ್ಷದ ಯೋಜನೆಗಳ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿದ ಮಾತನಾಡಿದ ಅವರು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಪ್ರತಿ ತಿಂಗಳು 2 ಸಾವಿರ ರೂಗಳನ್ನು ಕುಟುಂಬದ ಮುಖ್ಯಸ್ಥೆಯ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ಬಡವರು ಮತ್ತು ಹಿಂದುಳಿದ ವರ್ಗದವರಿಗೆ ಮೂಲಸೌಕರ್ಯ ಒದಗಿಸುವ ಸಲುವಾಗಿ ಗೃಹಜ್ಯೋತಿ ಯೋಜನೆಯನ್ನು ಚುನಾವಣೆಗೂ ಮುನ್ನಾ ಘೋಷಿಸಲಾಗಿದ್ದು 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಇದರ ಜತೆಗೆ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯನ್ನು ಮುಂದುವರೆಸಲಿದ್ದು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಯವರು ಅಪಪ್ರಚಾರಕ್ಕೆ ಜನತೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಈಗಾಗಲೇ ಘೋಷಣೆ ಮಾಡಲಾಗಿರುವ ಯೋಜನೆಗಳನ್ನು ಅಥಾವತ್ತಾಗಿ ಜಾರಿ ಮಾಡುವುದರ ಜತೆಗೆ ಜನತೆಗೆ ಉಪಯುಕ್ತವಾದ ಇನ್ನು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಈ ಹಿಂದೆ ಘೋಷಣೆ ಮಾಡಿದಂತಹ ಎಲ್ಲಾ ಭರವಸೆಗಳನ್ನು ಅಧಿಕಾರದಲ್ಲಿದ್ದಾಗ ಈಡೇರಿಸಿದ್ದೇವೆ ಆದ್ದರಿಂದ ಜನತೆ ಅಪಪ್ರಚಾರಕ್ಕೆ ಒಳಗಾಗಬಾರದು ಎಂಬ ಕಾರಣಕ್ಕಾಗಿ 2023ರ ಚುನಾವಣೆಗೂ ಮುನ್ನ ಘೋಷಣೆ ಮಾಡಿರುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂಬ ಭರವಸೆಯೊಂದಿಗೆ ಪಕ್ಷದ ವತಿಯಿಂದ ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತಿದೆ ಇದನ್ನು ಅರ್ಥ ಮಾಡಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಶದಲ್ಲಿ ಶಾಸಕರಾದ ಆರ್ ಬಸನಗೌಡ ತುರುವಿಹಾಳ. ಸಿದ್ದಣ್ಣ ಧಣಿ,ಮಲ್ಲಯ್ಯ ಬಳ್ಳಾ, ನಾರಾಯಣಪ್ಪ ಕಾಸ್ಲಿ. ಮಲ್ಲಯ್ಯ ಮುರಾರಿ, ಶಿವರೆಡ್ಡಿ, ಬಸವರಾಜ ಕೊಠಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.