ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.27: ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕರ್ತವ್ಯ. ಕ್ಷೇತ್ರದ ಜನತೆಯ ಮನೆ ಮಗನಾಗಿ ಅವರ ಬೇಕು ಬೇಡಗಳನ್ನು ಚೆನ್ನಾಗಿ ಅರಿತಿದ್ದೇನೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡುತ್ತಾ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದು ಕೆಂಪೇಗೌಡ ಉದ್ಯಾನವನ ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಬಹಳ ಸಂತೋಷವಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವಾರ್ಡ್ ನಲ್ಲಿ ನವೀಕರಿಸಲಾಗಿರುವ ಕೆಂಪೇಗೌಡ ಉದ್ಯಾನವನವನ್ನು ಇಂದು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಈ ಉದ್ಯಾನವನವನ್ನು ನಿರ್ಮಿಸಲಾಗಿದೆ ಇಷ್ಟೇ ಅಲ್ಲದೇ ನನ್ನ ಕ್ಷೇತ್ರದಲ್ಲಿ ಆಸ್ಪತ್ರೆಗಳು, ಸರ್ಕಾರಿ ಶಾಲೆ, ಮಹಾನಗರ ಪಾಲಿಕೆ ಶಾಲೆಗಳು, ನವ ನಂದಿನಿ ಉದ್ಯಾನವನ ಹೀಗೆ ಹಲವಾರು ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಮ್ಮ ಕ್ಷೇತ್ರಕ್ಕೆ ಆಗಿದೆ. ಇಂದರಿಂದ ನನಗೆ ಬಹಳ ಸಂತಸವಾಗಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಕ್ಷೇತ್ರದ ಜನರ ಉಳಿವಿಗಾಗಿ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೂಡಿ ಕಾರ್ಯನಿರ್ವಹಿಸಿ 350 ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಲಾಗಿತ್ತು.
ಅನೇಕ ತಿಂಗಳ ಕಾಲ ಯಾರಿಗೆ ಆಕ್ಸಿಜನ್ ಬೇಕಾಗಿದೆ ಅವರಿಗೆ ಕೊಡುವಂತಹ ಕೆಲಸವನ್ನು ಮುಖಂಡರುಗಳು ಮಾಡಿದ್ದರು ಎಂದರು.
ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು. ಅವರ ಆರೋಗ್ಯ ಉತ್ತಮ ರೀತಿಯಲ್ಲಿ ಇರಬೇಕು ಎಂಬ ಮೂಲ ಉದ್ದೇಶದಿಂದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಮ್ಮ ಕ್ಲಿನಿಕ್ ಅನ್ನು ಪ್ರಾರಂಭಿಸಿ ಕಾರ್ಯರೂಪಕ್ಕೆ ತರಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗಿ ಎಂದರು.
ಸಾರ್ವಜನಿಕರಿಗೆ ಉಚಿತವಾಗಿ ಥೈರಾಯಿಡ್, ಬಿಪಿ, ಶುಗರ್ ಪರೀಕ್ಷೆಯನ್ನು ಮಾಡಿ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗೆ ಮಾತ್ರೆಗಳನ್ನು ನೀಡಲಾಗುವುದು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಲೋಚನೆಯಂತೆ 2025 ರೊಳಗೆ ಕ್ಷಯ ಮುಕ್ತ ಭಾರತವನ್ನಾಗಿ ನಿರ್ಮಿಸುವ ಕನಸು ಕಟ್ಟಿದ್ದಾರೆ. ಇದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ನೆ.ಲ.ನರೇಂದ್ರ ಬಾಬು, ಉಪಮೇಯರ್ ಎಸ್.ಹರೀಶ್, ಹೇಮಲತಾ ಗೋಪಾಲಯ್ಯ, ಬಿಜೆಪಿ ಜಿಲ್ಲಾ ಉತ್ತರ ಘಟಕದ ಉಪಾಧ್ಯಕ್ಷ ಜಯರಾಮ್, ನಾರಾಯಣ್ ಸ್ವಾಮಿ, ಬಿಬಿಎಂಪಿ ಜಂಟಿ ಆಯುಕ್ತರಾದ ಆರ್.ಲೋಕನಾಥ್, ಶ್ರೀನಿವಾಸ್, ಜಯಸಿಂಹ, ರಘು, ತಿಮ್ಮೇಗೌಡ, ಮೈತ್ರಿ, ನಿಸರ್ಗ ಜಗದೀಶ್, ಬಸವರಾಜು, ಬಿಬಿಎಂಪಿ ಇಂಜಿನಿಯರ್ ತಿಮ್ಮರಸು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.