ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.15: ನಮ್ಮ ಬಳಿ ಇರುವುದು ಖಾಲಿ ಪೆನ್ ಡ್ರೈವ್ ಅಲ್ಲ. ಅದನ್ನು ಬಿಡುಗಡೆ ಮಾಡಿದರೆ ತನಿಖೆ ಮಾಡುವ ಪ್ರಾಮಾಣಿಕತೆ ಸರ್ಕಾರಕ್ಕೆ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ಜಾತ್ಯತೀತ ಜನತಾದಳ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕುಮಾರಸ್ವಾಮಿ ಅವರದು ಹಿಟ್ ಅಂಡ್ ರನ್ ಎಂದಿದು ಸಿದ್ದರಾಮಯ್ಯ ಹೇಳುತ್ತಾರೆ. ಹಿಂದೆ ವೀರಪ್ಪ ಮೊಯಿಲಿ ಅವರ ಕಾಲದಲ್ಲಿ ಒಂದು ಟೇಪ್ ಆಚೆಗೆ ಬಂತು. ನಮಗೆ ಹಣದ ಆಮಿಷ ಒಡ್ಡಿದರು ಎಂದು ಮಾಧ್ಯಮಗಳ ಮುಂದೆ ನೋಟಿನ ಕಂತೆಗಳನ್ನು ಪ್ರದರ್ಶನ ಮಾಡಿದರು. ಕೊನೆಗೆ ಅದರ ಕಥೆ ಏನಾಯಿತು? ನಾವು ಕೊಡುವ ದಾಖಲೆಗಳನ್ನು ಇವರು ಪ್ರಾಮಾಣಿಕವಾಗಿ ತನಿಖೆ ಮಾಡಿಸುತ್ತಾರಾ? ಸಚಿವರ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ತನಿಖೆಗೆ ಮೊದಲೇ ನಕಲಿ ಪತ್ರ ಎಂದರನ್ನು ಹೇಗೆ ನಂಬುವುದು? ಎಂದು ಅವರು ಪ್ರಶ್ನಿಸಿದರು.
ಸೋಮವಾರದ ದಿನ ಕಾಂಗ್ರೆಸ್ ಕಚೇರಿಯಲ್ಲಿ ಸಭೆಯೊಂದು ನಡೆದಿದೆ. ಆ ಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ವೀರಾವೇಶದಲ್ಲಿ ಮಾತಾಡಿದ್ದಾರೆ. ಮುಖ್ಯಮಂತ್ರಿ ಪೆನ್’ಡ್ರೈವ್ʼಗೆ ಪ್ರತಿಯಾಗಿ ಪೆನ್ ತೆಗೆದು ತೋರಿಸಿ ಅಭಿನಯ ಮಾಡಿದ್ದಾರೆ. ಅವರ ಅಭಿನಯಕ್ಕೆ ಉತ್ತರ ಕೊಡದೇ ಇರಲಾರೆ. ನಾನು ಇಡುವ ಸಾಕ್ಷ್ಯಕ್ಕೆ ಪ್ರತಿಯಾಗಿ ಆರೋಪಿತ ವ್ಯಕ್ತಿಯ ಮೇಲೆ ಕ್ರಮ ಜರಿಗಿಸುವ ಎದೆಗಾರಿಕೆ ಮುಖ್ಯಮಂತ್ರಿಗೆ ಇದೆಯಾ? ಇದ್ದರೆ ಹೇಳಲಿ ಎಂದು ಮಾಜಿ ಮುಖ್ಯಮಂತ್ರಿಗಳು ಸವಾಲು ಹಾಕಿದರು.
ಇವರು (ಸಿದ್ದರಾಮಯ್ಯ) ಪ್ರತಿಪಕ್ಷ ನಾಯಕರಾಗಿದ್ದಾಗ ಎಷ್ಟು ದಾಖಲೆ ಬಿಡುಗಡೆ ಮಾಡಿದ್ದರು? ಇವರ ಯೋಗ್ಯತೆಗೆ ಒಂದೇ ಒಂದು ದಾಖಲೆಯನ್ನೂ ಬಿಡುಗಡೆ ಮಾಡಿರಲಿಲ್ಲ. ಇಂಥವರು ಇನ್ನೊಬ್ಬರ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ. ಪ್ರತಿದಿನ ನಾವು ಗ್ಯಾರಂಟಿ ಕೊಟ್ಟಿದ್ದೇವೆ ಕೊಚ್ಚಿಕೊಳ್ಳುತ್ತಿದ್ದೀರಿ. ನೀವೇನು ಕಾಂಗ್ರೆಸ್ ಕಚೇರಿಯಿಂದ, ನಿಮ್ಮ ಮನೆ ದುಡ್ಡಿನಿಂದ ಕೊಟ್ಟಿದ್ದೀರಾ? ಅದಕ್ಕೆ ಪ್ರತೀದಿನ ಜಾಹೀರಾತು.. ಬಣ್ಣಬಣ್ಣದ ಕೂಲಿಂಗ್ ಗ್ಲಾಸುಗಳನ್ನು ಹಾಕಿಕೊಂಡು ಪೋಸು ಕೊಡುವುದು ಬೇರೆ? ಹಿಂದೆ ನಿಮ್ಮನ್ನು ಜನ ಯಾಕೆ ಮನೆಗೆ ಕಳಿಸಿದ್ದರು? ನಿಮ್ಮ ಪಾಪದ ಕೊಡ ತುಂಬಿದೆ ಅಂತಲೇ ಕಳಿಸಿದ್ದರು. ಈಗಲೂ ಅಷ್ಟೇ, ಮೂರೇ ತಿಂಗಳಿಗೇ ನಿಮ್ಮ ಬಣ್ಣ ಬಯಲಾಗಿದೆ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು.
ಕನ್ನಡದಲ್ಲಿ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಚಾಪ್ಟರ್ 1, ಚಾಪ್ಟರ್ 2 ಎಂದೆಲ್ಲಾ ಬರುತ್ತಿವೆ. ಅದೇ ರೀತಿ ರಾಜ್ಯ ಕಾಂಗ್ರೆಸ್ ಸರಕಾರದ ಲಂಚಾವತಾರದ ಹಗರಣಗಳು ಕೂಡ ಬರುತ್ತಿವೆ. ಸಿನಿಮಾ ಎಂದ ಮೇಲೆ ಕೊನೆ ಎಂಬುದು ಇರಲೇಬೇಕು, ನಾಟಕ ಎಂದರೆ ಅದಕ್ಕೆ ಅಂತಿಮ ತೆರೆ ಎಳೆಯಲೇಬೇಕು. ಈ ಸರಕಾರದ ಲಂಚಾವತಾರಕ್ಕೂ ಅಂತಿಮ ತೆರೆ ಬೀಳುವ ದಿನ ದೂರವಿಲ್ಲ ಎಂದರು.
40 ಪರ್ಸೆಂಟ್ ಡಿಮಾಂಡ್ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರು ಹಾದಿ ಬೀದಿಲಿ ಮಾತನಾಡುತ್ತಿದ್ದರು. ಅವರೇ ಬಾಣಲೆಯಿಂದ ಬೆಂಕಿಗೆ ಬಿದ್ದೆವು ಎಂದು ಮಾಧ್ಯಮಗಳಿಗೇ ಹೇಳಿದರು. ಆದರೆ ಈಗ ಅವರ ವರಸೆಯೇ ಬದಲಾಗಿದೆ. ಹಗಲಲ್ಲಿ ವೀರಾವೇಶ ತೋರಿ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ ಎಂದು ಸವಾಲು ಹಾಕಿದವರು, ರಾತ್ರಿಯಾಗುವ ಹೊತ್ತಿಗೆ ತಣ್ಣಗಾಗಿದ್ದಾರೆ. ಅವರನ್ನು ತಣ್ಣಗೆ ಮಾಡಿದವರು ಯಾರು? ಅವರ ಮೇಲೆ ಒತ್ತಡ ಹೇರಿ ಮಧ್ಯಸ್ಥಿಕೆ ವಹಿಸಿ, ‘ನಾನು ಭಾವುಕತೆಯಿಂದ ಈ ಆರೋಪ ಮಾಡಿದೆ’ ಎಂದು ಹೇಳಿಕೆ ಕೊಡಿಸಿದರು ಎಂದು ಕುಮಾರಸ್ವಾಮಿ ಅವರು ದೂರಿದರು.
ಉಪ ಮುಖ್ಯಮಂತ್ರಿ ಅವರು ನಮ್ಮ ಅಜ್ಜಯ್ಯನ ಕಥೆ ಇವರಿಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಅಜ್ಜಯ್ಯನ ರಕ್ಷಣೆ ಇಲ್ಲ, ಅವರೊಬ್ಬರಿಗೆ ಮಾತ್ರ ಅಜ್ಜಯ್ಯನ ರಕ್ಷಣೆ ಇರೋದು. ಹಾಗಿದ್ದರೆ, ನಮ್ಮ ರಕ್ಷಣೆ ಮಾಡೋರು ಯಾರು? ನಾಡಿನ ಜನರನ್ನು ರಕ್ಷಣೆ ಮಾಡುವವರು ಯಾರು? ಈ ಬಗ್ಗೆ ಅವರು ಹೇಳಬೇಕಲ್ಲವೇ? ಎಂದು ಡಿಕೆ ಶಿವಕುಮಾರ್ ಅವರ ಹೆಸರು ಹೇಳದೆಯೇ ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.
ಬಿಜೆಪಿಗೆ ನಾನೇನು ಅಡಿಯಾಳಲ್ಲ:
ಬಿಜೆಪಿ ಪರ ವಕ್ತಾರಿಕೆ ಮಾಡುವುದಕ್ಕೆ ಅಥವಾ ಅವರ ಪರವಾಗಿ ಮಾತನಾಡುವುದಕ್ಕೆ ನಾನೇನು ಅವರ ಅಡಿಯಾಳಲ್ಲ. ವಿರೋಧ ಪಕ್ಷದ ಸಾಮಾನ್ಯ ಶಾಸಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಕುಮಾರಸ್ವಾಮಿಗೆ ಹೊಟ್ಟೆ ಉರಿ ಅಂತಾ ಹೇಳುತ್ತಿದಾರೆ. ನನಗೆ ಏನಾಗಿದೆಯೋ ಅದಕ್ಕೆ ಔಷಧಿ ತಗೊಳ್ತೀನಿ. ವಾಸ್ತವ ಮಾತನಾಡಿ ಜನರಿಗೆ ಆಗುತ್ತಿರುವ ಸಂಕಟಕ್ಕೆ ನಿಮ್ಮಲ್ಲಿ ಪರಿಹಾರ ಏನಿದೆ ಎಂದು ಪ್ರಶ್ನಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ, ಪಕ್ಷದ ಹಿರಿಯ ನಾಯಕರಾದ ನಾರಾಯಣ ರಾವ್, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ ಉಪಸ್ಥಿತರಿದ್ದರು.