ಸುದ್ದಿಮೂಲ ವಾರ್ತೆ
ಮೈಸೂರು, ಅ.21:ಭಾರತದಲ್ಲಿ ಮಣ್ಣಿಗೆ ಪೂಜ್ಯನೀಯ ಭಾವನೆ ಇದ್ದು, ನಮ್ಮದು ಐಕ್ಯತೆಯ ರಾಷ್ಟ್ರವಾಗಿದೆ ಎಂದು ಎಚ್.ಡಿ.ಕೋಟೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಧರಣೇಶ್ ಹೇಳಿದರು.
ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನೆಹರು ಯುವ ಕೇಂದ್ರ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು, ತಾಲ್ಲೂಕು ಪಂಚಾಯತಿ, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹೆಚ್.ಡಿ.ಕೋಟೆ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ‘ನನ್ನ ಮಣ್ಣು ನನ್ನ ದೇಶ’ ಅಮೃತ ಕಳಶ ಯಾತ್ರೆ, ಮಣ್ಣಿಗೆ ನಮನ ವೀರರಿಗೆ ವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹುತಾತ್ಮ ವೀರಯೋಧರಿಗೆ ಗೌರವ ಸಲ್ಲಿಸಲು ದೆಹಲಿಯ ಇಂಡಿಯಾ ಗೇಟ್ ನ ಕರ್ತವ್ಯ ಪಥದಲ್ಲಿ ಅಮೃತವಾಟಿಕ ಉದ್ಯಾನವನ ಸ್ಮಾರಕ ಅಭಿವೃದ್ಧಿ ಪಡಿಸಲಾಗುತ್ತದೆ. ಇದು ದೇಶದ ಜನರ ಸಂಸ್ಕೃತಿ, ಪರಂಪರೆ ಹಾಗೂ ಸಾಧನೆಗಳ ಭವ್ಯ ಇತಿಹಾಸವನ್ನು ಸ್ಮರಿಸಲು ಯುವ ಪೀಳಿಗೆಗೆ ನೆರವಾಗುತ್ತದೆ ಎಂದು ತಿಳಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಅಮೃತ ಕಳಸವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನೆಹರು ಯುವ ಕೇಂದ್ರದ ಸ್ವಯಂ ಸೇವಕರಿಗೆ ಹಸ್ತಾಂತರಿಸಿದರು. ತಾಲ್ಲೂಕಿನ ನಿವೃತ್ತ ಯೋಧ ಸುರೇಶ್, ಯೋಧ ನವೀನ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಿಂದ ತಾಲ್ಲೂಕು ಪಂಚಾಯಿತಿವರೆಗೆ ನನ್ನ ಮಣ್ಣು ನನ್ನ ದೇಶ, ಮಣ್ಣನ್ನು ರಕ್ಷಿಸಿ ಎಂಬ ಘೋಷ ವಾಕ್ಯಗಳನ್ನು ಕೂಗುತ್ತಾ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ರಂಗಸ್ವಾಮಿ , ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರಾದ ರಘುನಾಥ್ ಕೆ.ಎಂ, ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎನ್.ವೆಂಕಟೇಶ್, ಎನ್.ಎಸ್.ಎಸ್. ಸಂಯೋಜಕರಾದ ಎಮ್.ಆರ್.ರಾಮಚಂದ್ರ, ನೆಹರು ಯುವ ಕೇಂದ್ರದ ಸ್ವಯಂ ಸೇವಕ ಲಕ್ಷ್ಮೀಕಾಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.