ಸುದ್ದಿಮೂಲ ವಾರ್ತೆ
ಮೈಸೂರು, ಅ.7: ಅರಮನೆಗಳ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದರು.
ಇಲ್ಲಿನ ಮೈಸೂರಿನ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ ಮತ್ತು ಬೆಂಕಿಯಲ್ಲಿ ಸುಟ್ಟರೆ ವಿನಾಶಕಾರಿ ಅಂಶಗಳನ್ನು ಗಾಳಿಯಲ್ಲಿ ಸೇರಿಸುವ ಏಕ ಬಳಕೆ ಪ್ಲಾಸ್ಟಿಕ್ ನಿಂದ ಸಮಸ್ಯೆಗಳು ಹೆಚ್ಚುತ್ತಿದೆ ಎಂದು ಹೇಳಿದರು.
ಇದನ್ನು ತಪ್ಪಿಸಲು ಜೂ.5ರಂದು ವಿಶ್ವ ಪರಿಸರ ದಿನದಂದು ಘೋಷಿಸಿದ ರೀತ್ಯ ಮೈಸೂರು, ಬೀದರ್, ಗುಲ್ಬರ್ಗಾ, ತುಮಕೂರು ಮತ್ತು ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಹಸಿರು ವ್ಯಾಪ್ತಿ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸಲು ಪ್ರಾಣಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಈವರೆಗೆ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆಯ ಕಲಂ 17 ಮತ್ತು 33ರ ಅಡಿಯಲ್ಲಿ 5700 ಎಕರೆಗೂ ಹೆಚ್ಚು ಪ್ರದೇಶವನ್ನು ಮೀಸಲು ಅರಣ್ಯ ಮತ್ತು ರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ. ಜೊತೆಗೆ 2 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ ಎಂದು ತಿಳಿಸಿದರು.
ಮಾನವ- ವನ್ಯ ಜೀವಿ ಸಂಘರ್ಷ ತಪ್ಪಿಸಲು
ರಾಜ್ಯ ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, 6395 ಆನೆಗಳಿವೆ. ಹುಲಿಗಳ ಸಂಖ್ಯೆ 563 ಇದ್ದು ರಾಜ್ಯ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ವನ್ಯ ಜೀವಿಗಳ ಸಂಖ್ಯೆ ಹೆಚ್ಚಳವಾದಂತೆ ಅರಣ್ಯ ಪ್ರದೇಶವೂ ಹೆಚ್ಚಳವಾಗುವ ಅನಿವಾರ್ಯತೆ ಇದೆ. ಆದರೆ ಅರಣ್ಯ ಪ್ರದೇಶ ಕ್ಷೀಣಿಸಿರುವ ಪರಿಣಾಮ, ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಈ ಸಂಘರ್ಷ ತಪ್ಪಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಂದು ತಿಳಿಸಿದರು.
ಆನೆಗಳು ಆಹಾರ ಮತ್ತು ನೀರು ಅರಸಿ ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣವೇ ನಿರ್ಣಾಯಕವಾಗಿದ್ದು ಇನ್ನೂ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಬೇಕಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನ ನೀಡಲು ಸಮ್ಮತಿಸಿರುವ ಮುಖ್ಯಮಂತ್ರಿಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುವುದಾಗಿ ಹೇಳಿದರು..
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಿದರು. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಶೇಷ ಸಾಧಕರಿಗೆ ಸನ್ಮಾನಿಸಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಿದ್ದರು.
ಮೇಯರ್ ಶಿವಕುಮಾರ್, ಶಾಸಕರಾದ.ಅನಿಲ್ ಚಿಕ್ಕಮಾದು. ಡಿ.ರವಿಶಂಕರ್, ಜಿ.ಡಿ.ಹರೀಶ್ ಗೌಡ, ದರ್ಶನ್ ದೃವನಾರಾಯಣ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.
ಮನುಷ್ಯನ ದುರಾಸೆಯಿಂದ ಅರಣ್ಯ ನಾಶ: ಸಿಎಂ
ಶೇ 33 ರಷ್ಟು ಅರಣ್ಯ ಇದ್ದರೆ ಮಾತ್ರ ಪರಿಸರ ಸಮತೋಲನ ಇರುತ್ತದೆ. ಆದರೆ ಮನುಷ್ಯನ ದುರಾಸೆ ಮತ್ತು ದುರ್ಬುದ್ದಿಯಿಂದ ಅರಣ್ಯ ನಾಶ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಮತ್ತು ಪರಿಸರ ಇಲಾಖೆ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಹುಲಿ ಮತ್ತು ಆನೆಗಳ ಸಂಖ್ಯೆ ಹೆಚ್ಚಿದೆ. ಆನೆ ಸಂಪತ್ತಿನಲ್ಲಿ ರಾಜ್ಯ ಪ್ರಥಮ ಮತ್ತು ಹುಲಿ ಸಂಪತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವುದು ಖುಷಿಯ ವಿಚಾರ. ಪ್ರಾಣಿ ಮತ್ತು ಮನುಷ್ಯರ ಸಹ ಜೀವನ ಇರಬೇಕು. ಪರಿಸರ ಸಮತೋಲನ ಸಾಧ್ಯ ಎಂದು ಹೇಳಿದರು.
ರಾಜ್ಯದಲ್ಲಿ ಈಗ ಶೇ.22 ರಷ್ಟಾದರೂ ಅರಣ್ಯ ಉಳಿದಿರುವುದಕ್ಕೆ ಬುಡಕಟ್ಟು ಸಮುದಾಯದವರು, ಕಿರಿಯ ಅರಣ್ಯ ಸಹಾಯಕರು, ಕಾವಾಡಿಗರು, ಮಾವುತರು ಮತ್ತು ಕೆಳ ಹಂತಹ ಅರಣ್ಯ ಇಲಾಖೆ ಸಿಬ್ಬಂದಿಯ ಕಾಳಜಿ ಮತ್ತು ಶ್ರಮ ಕಾರಣ ಎಂದು ಮೆಚ್ಚುಗೆ ಸೂಚಿಸಿದರು.