ಸುದ್ದಿಮೂಲ ವಾರ್ತೆ
ಮೈಸೂರು, ನ.15: ಮುಂಬರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಹಾಲಿ ಬಿಜೆಪಿಯ ಶಾಸಕರಾದ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರ ಮುಂಚೂಣಿಗೆ ಬಂದಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಹಿಂದೆ ಸಿಎಂ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರನ್ನೇ ಕಣಕ್ಕೆ ಇಳಿಸುವ ಬಗ್ಗೆ ಭಾರಿ ಚಿಂತನೆ ನಡೆಸಲಾಗಿತ್ತು. ಕೆಲ ಸಂಘಟನೆಗಳು ಯತೀಂದ್ರ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಆಗ್ರಹಪಡಿಸಿದ್ದವು. ಆದರೆ, ಸಮೀಕ್ಷೆ ನಡೆಸಿದಾಗ ನಿರೀಕ್ಷಿತ ಮಟ್ಟದಲ್ಲಿ ಯತೀಂದ್ರ ಪರ ಜನಾಭಿಪ್ರಾಯ ಬರಲಿಲ್ಲ. ಆದ ಕಾರಣ ಅಂತಿಮವಾಗಿ ಸಿದ್ದರಾಮಯ್ಯನವರು ಈ ಕ್ಷೇತ್ರದಿಂದ ಒಕ್ಕಲಿಗರನ್ನೇ ಕಣಕ್ಕೆ ಇಳಿಸಿ, ಈಗಾಗಲೇ 2 ಬಾರಿ ಬಿಜೆಪಿಯಿಂದ ಇದೇ ಕ್ಷೇತ್ರದಿಂದ ಗೆದ್ದಿರುವ ಪ್ರತಾಪ್ ಸಿಂಹ ಅವರನ್ನು ಸೋಲಿಸಲೇಬೇಕು ಎಂದು ನಿರ್ಧರಿಸಿರುವುದು ಗುಟ್ಟಾಗಿ ಉಳಿದಿಲ್ಲ.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಡಾ.ಸುಶ್ರುತ್, ಕೆಪಿಸಿಸಿ ವಕ್ತಾರ ಲಕ್ಷಣ್ ಅವರ ಜೊತೆಯಲ್ಲಿ ಮೂಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದವು. ಆದರೆ, ಈಗ ಹಾಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಒಂದು ಕಾಲನ್ನು ಕಾಂಗ್ರೆಸ್ನಲ್ಲಿ ಇಟ್ಟಿರುವ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಮೈಸೂರು-ಕೊಡಗು ಕ್ಷೇತ್ರದಿಂದ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಗಂಭೀರ ಚರ್ಚೆ ಆಗುತ್ತಿದೆ.
ಸೋಮಶೇಖರ್ ಒಕ್ಕಲಿಗ ಸಮೂದಾಯಕ್ಕೆ ಸೇರಿದ್ದು, ಅವರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿದೆ. ಅಲ್ಲದೇ 2013 ರಿಂದ 2023 ರವರೆಗೆ ಬಿಜೆಪಿಯಿಂದ ಸಹಕಾರ ಸಚಿವರಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದರಿಂದ ಮೈಸೂರು ಭಾಗದಲ್ಲಿ ಪರಿಚಿತರಿದ್ದಾರೆ. ಮತ್ತು ಕಾಂಗ್ರೆಸ್ನಿಂದು ಟಿಕೆಟ್ ನೀಡಿದರೇ ಬಿಜೆಪಿ ಪ್ರಮುಖರನ್ನು ಪಕ್ಷಕ್ಕೆ ಕರೆ ತರುತ್ತಾರೆ. ಇದರಿಂದ ಪಕ್ಷಕ್ಕೂ ಅನುಕೂಲ ಮತ್ತು ಮೈಸೂರು ಲೋಕಸಭಾ ಕ್ಷೇತ್ರದಿಂದ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬ ಲೆಕ್ಕಾಚಾರ ಕಾಂಗ್ರೆಸ್ನ ರಾಜ್ಯ ಮುಖಂಡರದ್ದಾಗಿದೆ ಎಂದು ಹೇಳಲಾಗುತ್ತಿದೆ.
ಸೋಮಶೇಖರ್ ಅವರ ಪರ ಡಿ.ಕೆ.ಶಿವಕುಮಾರ್ ಬೆನ್ನುಲುಬಾಗಿ ನಿಂತಿದ್ದಾರೆ. ಆದರೆ ಸಿದ್ದರಾಮಯ್ಯ ನವರು ಈ ಬಗ್ಗೆ ಅಳೆದುತೂಗಿ ಸ್ಪಷ್ಟ ಚಿತ್ರಣವನ್ನು ಪಡೆದೇ ಸೋಮಶೇಖರ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಹಸಿರು ನಿಶಾನೆ ತೋರುವರು. ಅಂತಿಮವಾಗಿ ಸೋಮಶೇಖರ್ಗೆ ಟಿಕೆಟ್ ನೀಡುವುದು ಸಿದ್ದರಾಮಯ್ಯನವರ ನಿರ್ಧಾರದ ಅಂಗಳದಲ್ಲಿ ಇದೆ.
ಸೋಮಶೇಖರ್ ಹೊರಗಿವರು ಎಂಬ ವಿಚಾರ ಬರುವುದಿಲ್ಲ. ಏಕೆಂದರೆ ತಮಗೆ ಪ್ರಬಲ ಸ್ಪರ್ಧೆ ಒಡ್ಡುವ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರತಾಪ್ ಸಿಂಹ ಕೂಡ ಹಾಸನ ಜಿಲ್ಲೆ ಸಕಲೇಶಪುರದವರು. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರಂತೂ, ಈ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವ ಒಕ್ಕಲಿಗರ ಮತಗಳನ್ನು ಪಕ್ಷಕ್ಕೆ ಕೊಡಿಸುವ ಭರವಸೆ ನೀಡುವ ಮೂಲಕ ಸೋಮಶೇಖರ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಈಗಾಗಲೇ ತಮ್ಮ ಪಕ್ಷದಿಂದ ಅಭ್ಯರ್ಥಿ ಹೂಡುವುದಿಲ್ಲ. ಪ್ರತಾಪ್ ಸಿಂಹ ಅವರೇ ಮೈತ್ರಿ ಅಭ್ಯರ್ಥಿ ಆಗುತ್ತಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಬಹಿರಂಗವಾಗಿಯೇ ಹೇಳುವ ಮೂಲಕ ಒಕ್ಕಲಿಗರ ಮತ ಯಾರಿಗೆ? ಎಂಬ ಸಂದೇಶವನ್ನು ಪರೋಕ್ಷವಾಗಿ ಕಾಂಗ್ರೆಸ್ ರವಾನಿಸಿದ್ದಾರೆ. ಇದಕ್ಕೆ ಮಾಜಿ ಸಚಿವ ಸಾ.ರಾ. ಮಹೇಶ್ ಕೂಡ ಯೆಸ್ ಎಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ಅತ್ಯಂತ ಪ್ರಬಲ ಅಭ್ಯರ್ಥಿಯನ್ನೇ ನಿಲ್ಲಿಸಲು ತೀವ್ರತರನಾಗಿಯೇ ತಲಾಷ್ ನಡೆಸುತ್ತಿದೆ. ಈ ಪ್ರಕ್ರಿಯೆಯನ್ನು ಸೋಮಶೇಖರ್ ಅವರ ಹೆಸರು ಮುಂಚೂಣಿಗೆ ಬಂದಿದೆ.
ಲೋಕಸಭೆ ಅಭ್ಯರ್ಥಿ ಆಯ್ಕೆ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ನಡೆದ ಕ್ಷೇತ್ರದ ಆಕಾಂಕ್ಷಿಗಳ ಸಭೆಯಲ್ಲಿ 14 ಮಂದಿಯ ಹೆಸರನ್ನು ಅಂತಿಮಗೊಳಿಸಿ ತೀರ್ಮಾನಿಸಲಾಯಿತು. ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮುಖಂಡರಾದ ಜೆ.ಜೆ.ಆನಂದ್, ಡಾ.ಸುಶ್ರುತ್, ವರುಣ ಮಹೇಶ್, ಹಿರಿಯ ವಕೀಲ ಚಂದ್ರಮೌಳಿ ಸೇರಿದಂತೆ ಆನೇಕ ಅರ್ಜಿ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಆಯ್ಕೆ ಸಮಿತಿಯ ಸಿಎಲ್ಪಿ ಸಭೆಯಲ್ಲಿ ಅಭ್ಯರ್ಥಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಿಗೊಳಿಸುವ ತೀರ್ಮಾನಕ್ಕೆ ಬದ್ಧವಾಗಿರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಯಾರ ಮತಗಳೆಷ್ಟು ?
ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ, ನರಸಿಂಹರಾಜ, ಚಾಮರಾಜ, ಕೃಷ್ಣರಾಜ, ಪಿರಿಯಾಪಟ್ಟಣ, ಹುಣಸೂರು ಮತ್ತು ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ 8 ಕ್ಷೇತ್ರಗಳಲ್ಲಿ ಒಟ್ಟು 15 ಲಕ್ಷ ಮತದಾರರು ಇದ್ದಾರೆ. ಅದರಲ್ಲಿ ಅಂದಾಜಿನ ಪ್ರಕಾರ ಒಕ್ಕಲಿಗರು- 4.70 ಲಕ್ಷ, ಎಸ್ಸಿ, ಎಸ್ಟಿ- 4 ಲಕ್ಷ, ಮುಸ್ಲಿಂ-3 ಲಕ್ಷ, ಲಿಂಗಾಯಿತರು 2, ಕುರುಬರು 1.50 ಲಕ್ಷ ಇದ್ದಾರೆ.
ನನಗೆ ಮಾಹಿತಿ ಇಲ್ಲ
ಮಾಜಿ ಸಚಿವ ಸೋಮಶೇಖರ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ಮೇಲ್ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಬಗ್ಗೆ ನನಗೆ ಪೂರ್ಣ ಪ್ರಮಾಣದಲ್ಲಿ ಗೊತ್ತಿಲ್ಲ. ಈಗಾಗಲೇ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ. ಅದರಲ್ಲಿ ಸೋಮಶೇಖರ್ ಹೆಸರಿಲ್ಲ. ನಾನು ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದೇನೆ.