ಸುದ್ದಿಮೂಲ ವಾರ್ತೆ
ಬೆಂಗಳೂರು, ಅ, 31 : ಬೆಂಗಳೂರಿನ ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಬೆಂಗಳೂರು ಚಿರತೆ ಸೆರೆಗೆ ಮೈಸೂರಿನ ಟಾಸ್ಕ್ ಫೋರ್ಸ್ ತಂಡ ಕಾರ್ಯನಿರತವಾಗಿದೆ. ಈಗಾಗಲೇ ಹಲವು ಕಡೆ ಚಿರತೆಗಳನ್ನು ಹಿಡಿದು ಪರಿಣಿತರಾಗಿರುವ ಸಿಬ್ಬಂದಿ ಚಿರತೆ ಕಾರ್ಯಾಚರಣೆ ನಡೆಸಲಿದ್ದಾರೆ. ಜತೆಗೆ ಬನ್ನೇರುಘಟ್ಟದಿಂದ ಬಯೋಲಾಜಿಕಲ್ ಪಾರ್ಕ್ನಿಂದ ವೈದ್ಯಾಧಿಕಾರಿ ತಂಡವು ಆಗಮಿಸಿದೆ.
ಕೂಡ್ಲು- ಸಿಂಗಸಂದ್ರ ಬಳಿಯ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸೋಮವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿದೆ. ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸ್ ನೈಟ್ ಬೀಟ್ ಮಾಡುವಾಗ ಚಿರತೆ ಓಡಾಡಿದೆ. ಖಾಲಿ ಬಿಲ್ಡಿಂಗ್ ಮುಂಭಾಗದಲ್ಲಿ ಚಿರತೆ ಓಡಾಟ ಕಂಡು ಪೊಲೀಸರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಿಲ್ಡಿಂಗ್ ಒಳಗಡೆಯೇ ಚಿರತೆ ಇರುವ ಶಂಕೆ ಇದೆ. ಹೀಗಾಗಿ ಕಗ್ಗಲೀಪುರ, ಆನೇಕಲ್ ಅರಣ್ಯಾಧಿಕಾರಿಗಳಿಂದ 4 ಬೋನ್ಗಳನ್ನು ಇಡಲಾಗಿದೆ.
ಕಾರ್ಯಾಚರಣೆ ವೇಳೆ ಜನರು ಓಡಾಡದಂತೆ ಪಾಲು ಬಿದ್ದ ಬಿಲ್ಡಿಂಗ್ ಬಳಿ ಎರಡು ಕಡೆ ರಸ್ತೆ ಬಂದ್ ಮಾಡಲಾಗಿದೆ. ಚಿರತೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಬಾರದೆಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಕ್ಕಪಕ್ಕದಲ್ಲಿ ಪ್ರತಿಷ್ಠಿತ ಐಟಿ ಕಂಪನಿಗಳಿರುವ ಹಿನ್ನೆಲೆಯಲ್ಲಿ ಯಾರು ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ಪಾಳು ಬಿದ್ದ ಬಿಲ್ಡಿಂಗ್ನಲ್ಲಿ ಚಿರತೆ ಓಡಾಟ ನಡೆಸಿರುವ ಹೆಜ್ಜೆ ಗುರುತು ಪತ್ತೆಯಾಗಿದೆ.
ಕೂಡ್ಲು ಭಾಗದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕವನ್ನು ಹೆಚ್ಚಿಸಿದ್ದು, ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಭಯದಿಂದಲೇ ಓಡಾಡುವಂತಾಗಿದೆ. ಥರ್ಮಲ್ ಡ್ರೋನ್ ಬಳಕೆ ಮತ್ತೊಂದೆಡೆ ಥರ್ಮಲ್ ಡ್ರೋನ್ ಮೂಲಕ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಹಗಲು ಮತ್ತು ರಾತ್ರಿ ಪ್ರಾಣಿಗಳ ಚಲನವಲನ ಥರ್ಮಲ್ ಡ್ರೋನ್ನಿಂದ ತಿಳಿಯಲಿದೆ. ರಾತ್ರಿ ಸಮಯದಲ್ಲೂ ಪ್ರಾಣಿಗಳ ದೃಶ್ಯ ಸೆರೆ ಹಿಡಿಯಬಲ್ಲ ಸಾಮರ್ಥ್ಯವನ್ನು ಈ ಥರ್ಮಲ್ ಡ್ರೋನ್ ಹೊಂದಿದೆ. ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಥರ್ಮಲ್ ಡ್ರೋನ್ ಬಳಸಲಾಗಿತ್ತು. ಈವರೆಗೂ ಹುಲಿ, ಚಿರತೆ, ಆನೆಗಳನ್ನು ಸೆರೆ ಹಿಡಿಯಲು ಡ್ರೋನ್ ಬಳಕೆ ಮಾಡಲಾಗಿದೆ.