ಬೆಂಗಳೂರು: ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಇತರರಿಗೆ ಕಳುಹಿಸಿದ ವಿದ್ಯಾರ್ಥಿನಿಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಡಿಯೋ ಯಾರ್ಯಾರಿಗೆ ಕಳುಹಿಸಿದ್ದಾರೆ ಎಂಬ ವಿವರವಾದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ಇದರ ವಿರುದ್ಧ ಇದೇ 27ರಂದು ಮಹಿಳಾ ಮೋರ್ಚಾ ಮೂಲಕ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಆ ಮೂರು ವಿದ್ಯಾರ್ಥಿನಿಯರನ್ನು ಕೂಡಲೇ ಬಂಧಿಸಲು ಅವರು ಒತ್ತಾಯಿಸಿದರು.
ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಲಿಮತುಲ್ಲ ಸಯೀಫ, ಶಬನಾಜ್, ಆಲಿಯ ಅವರು ಒಬ್ಬ ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಿ ಬೇರೆಬೇರೆ ಮೊಬೈಲ್ಗಳಿಗೆ, ಅವರ ಫ್ರೆಂಡ್ಸ್ ಗ್ರೂಪಿನ ಮೊಬೈಲ್ಗಳಿಗೆ ಹರಿಬಿಟ್ಟಿರುವ ವಿಚಾರ ನಮಗೆ ಗೊತ್ತಾಗಿದೆ. ವಿಡಿಯೋ ಕ್ಯಾಮೆರಾವನ್ನು ಶೌಚಾಲಯ, ಸ್ನಾನದ ಕೊಠಡಿಯಲ್ಲಿ ಇಟ್ಟು ಸ್ನಾನ ಮಾಡುವಾಗ ತೆಗೆಯಲಾಗಿದೆ. ಇದನ್ನು ಬೇರೆಯವರಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ್ದರೆ ಘಟನೆ ಹೇಗಿರುತ್ತಿತ್ತು? ಗಲಾಟೆ ಹೇಗಾಗುತ್ತಿತ್ತು ಎಂದು ಅವರು ಪ್ರಶ್ನಿಸಿದರು. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದ ಅವರು, ಈ ಸರಕಾರಕ್ಕೆ ಸಾಮಾನ್ಯ ಜ್ಞಾನ ಇಲ್ಲ ಎಂದು ಟೀಕಿಸಿದರು. ಜುಲೈ 19ರಂದು ಈ ಘಟನೆ ಬೆಳಕಿಗೆ ಬಂದಿದೆ. ಆ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ್ದನ್ನು ಹೊರತುಪಡಿಸಿದರೆ, ಬೇರೇನೂ ಕ್ರಮ ಕೈಗೊಂಡಿಲ್ಲ. ಅದರ ಬದಲಾಗಿ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ ರಶ್ಮಿ ಸಾಮಂತ್ ಎಂಬ ವಿದ್ಯಾರ್ಥಿನಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸರಕಾರಕ್ಕೆ ಮತಿಭ್ರಮಣೆ ಆಗಿದೆ ಎಂದ ಅವರು, ಹಿಂದೂ ವಿದ್ಯಾರ್ಥಿನಿ ಭಯಪಟ್ಟು ಕಾಲೇಜಿಗೆ ಹೋಗುತ್ತಿಲ್ಲ ಎಂದು ತಿಳಿಸಿದರು. ಸರಕಾರದ ಯೂನಿಫಾರ್ಮ್ ಹಾಕುವುದಿಲ್ಲ ಎಂದು ಹಿಜಾಬ್ ಹೋರಾಟ ಆಗಿತ್ತು; ಯಾರೂ ಮುಖ ನೋಡಬಾರದೆಂಬ ಸಂಪ್ರದಾಯಕ್ಕೆ ಸೇರಿದ ಧರ್ಮ ತಮ್ಮದು ಎಂದಿದ್ದರು. ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣದ ಬಗ್ಗೆ ಸರಕಾರ ಏನು ಹೇಳುತ್ತದೆ; ಏನು ಕ್ರಮ ನಿಮ್ಮದು ಎಂದು ಪ್ರಶ್ನಿಸಿದರು. ಹಿಂದೂಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೆ ಇನ್ನೊಂದು ನ್ಯಾಯವೇ? ಎಂದು ಕೇಳಿದರು. ರಶ್ಮಿ ಸಾಮಂತ್ ಅವರಿಗೆ ರಕ್ಷಣೆ ಕೊಡಿ ಎಂದು ಅವರು ತಿಳಿಸಿದರು.
ಈ ವಿಚಾರವಾಗಿ ಸಭೆ ನಡೆಸಿದ ಗೃಹ ಸಚಿವ ಡಾ.ಪರಮೇಶ್ವರ್ ಅವರು ಏನೂ ಕ್ರಮ ಕೈಗೊಂಡಿಲ್ಲ. ವಿಡಿಯೋವನ್ನು ಹರಿಬಿಡದಂತೆ ಸೂಚಿಸಿದ್ದಾರಷ್ಟೇ ಎಂದು ತಿಳಿಸಿದರು. ಮಾನಹಾನಿ ಮಾಡುವ, ಕೆಟ್ಟ ಆಲೋಚನೆಯ ದುರುದ್ದೇಶದ ವಿಡಿಯೋ ಚಿತ್ರೀಕರಣಕ್ಕೆ ಮರಣದಂಡನೆ ವಿಧಿಸುವುದು ಸೂಕ್ತ ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ತೇಜಸ್ವಿನಿ ಗೌಡ ಅವರು ತಿಳಿಸಿದರು.
ಹೊಸ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಾಡು ಬೆಚ್ಚಿಬೀಳುವ, ಭಯಾನಕ ವಾತಾವರಣಕ್ಕೆ ಸಾಕ್ಷಿ ಎನಿಸುವ ಘಟನಾವಳಿಗಳು ನಡೆಯುತ್ತಿವೆ. ಉಡುಪಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಡುವ ಮೂಲಕ ನಗ್ನಚಿತ್ರ ಚಿತ್ರೀಕರಿಸಿ ಒಂದು ಗುಂಪಿಗೆ ಕಳುಹಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಷ್ಠಿತ ಆಕ್ಸ್ಫರ್ಡ್ ವಿವಿಯ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಅವರ ಟ್ವೀಟ್ ಮೂಲಕ ಇದು ಬೆಳಕಿಗೆ ಬಂದಿದೆ. ಕಾಲೇಜಿನವರು ಆ 3 ಮುಸ್ಲಿಂ ಹೆಣ್ಮಕ್ಕಳನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ಈ ಸಂಬಂಧ ಅನೇಕ ಹೆಣ್ಮಕ್ಕಳು ಶಾಸಕರಿಗೆ ದೂರು ನೀಡಿದ್ದಾರೆ. ಈ ವಿಡಿಯೋ ಚಿತ್ರೀಕರಣ ವಿಕೃತ ಮಾತ್ರವಲ್ಲ; ವಿಧ್ವಂಸಕ ಚಟುವಟಿಕೆ ಎಂದು ಅವರು ತಿಳಿಸಿದರು.
ಪೊಲೀಸರು ರಶ್ಮಿ ಮನೆಗೆ ವಾರಂಟಿಲ್ಲದೇ ಹೋಗಿದ್ದಾರೆ. ಆಕೆಯ ಮನೆಯವರನ್ನು ಬೆದರಿಸಿದ್ದಾರೆ. ಘಟನೆಯನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ ಎಂದ ಅವರು, ಕರ್ನಾಟಕವನ್ನು ಸೇಫ್ ಹೆವನ್ ಮಾಡಲು ಕೆಲಶಕ್ತಿಗಳ ಪ್ರಯತ್ನ ನಡೆದಿದೆ ಎಂದು ಟೀಕಿಸಿದರು. ಮಕ್ಕಳಿಗಾಗಿ ಧರ್ಮಕ್ಕೊಂದು ಕಾಲೇಜು ಮಾಡಬೇಕಾಗುತ್ತದೆಯೇ ಎಂದೂ ಕೇಳಿದರು.
ಇದನ್ನು ಬೆಳಕಿಗೆ ತಂದ ರಶ್ಮಿ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ. ಮಾತ್ರವಲ್ಲದೆ, ಸುದ್ದಿ ಸತ್ಯಾಸತ್ಯತೆ ತಿಳಿಯಲು ಮಹಮ್ಮದ್ ಜುಬೇರ್, ಪ್ರತೀಕ್ ಸಿನ್ಹರ ಆಲ್ಟ್ ನ್ಯೂಸ್ ಮೂಲಕ ಮುಂದಾಗಿದ್ದಾರೆ. ಫೇಕ್ ನ್ಯೂಸ್ ಹರಡಿಸುವ ಗಂಭೀರವಾದ ಆರೋಪಗಳನ್ನು ಈ ಏಜೆನ್ಸಿ ಹೊತ್ತಿದೆ ಎಂದು ಆಕ್ಷೇಪಿಸಿದರು.
ಅಶ್ಲೀಲ ವಿಡಿಯೋ ಮಾಡಿ ಹಂಚಿಕೊಂಡ ಈ ಜಾಲವನ್ನು ಬಯಲಿಗೆ ಎಳೆಯಬೇಕು. ಅಪರಾಧದಲ್ಲಿ ತೊಡಗಿದ ವಿದ್ಯಾರ್ಥಿನಿಯರ ವಿರುದ್ಧ ತ್ವರಿತ ಗತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಸಮಾನ ನಾಗರಿಕ ಸಂಹಿತೆಯಲ್ಲಿ (ಯುಸಿಸಿ) ಹಿಂದೂ ಮದುವೆಯನ್ನು ನೋಂದಾಯಿಸುವ ಏಕೈಕ ಲಾಭವಿದೆ. ಕ್ರಿಶ್ಚಿಯನ್ನರಿಗೆ 2 ಲಾಭವಿದೆ. ಡೈವೋರ್ಸ್ ಆಗಲು 2 ವರ್ಷ ಬದಲಾಗಿ 6 ತಿಂಗಳೆಂದು ಬದಲಾಗಲಿದೆ. ಮುಸ್ಲಿಂ ಹೆಣ್ಮಕ್ಕಳಿಗೆ 11 ಲಾಭಗಳಿವೆ ಎಂದು ವಿವರಿಸಿದರು. ಅವರಿಗೆ ತಾಯಿ, ಮಗಳು ಸೇರಿ ಎಲ್ಲರಿಗೂ ಸಂಪೂರ್ಣ ಲಾಭವಿದೆ ಎಂದು ವಿಶ್ಲೇಷಿಸಿದರು.
ಗಂಡ ಇಮೇಲ್ ಮೂಲಕ ತಲಾಖ್ ಕೊಟ್ಟದ್ದರ ವಿರುದ್ಧ ವೈದ್ಯೆಯಾಗಿರುವ ಮುಸ್ಲಿಂ ಹೆಣ್ಮಗಳ ಹೋರಾಟವನ್ನು ಅವರು ವಿವರಿಸಿದರು. ಮಹಿಳೆಯನ್ನು ಮೃಗಕ್ಕಿಂತ ಕೀಳಾಗಿ ನೋಡುವ ಕಾನೂನನ್ನು ಇವತ್ತಿನ ದಿನ ಸಹಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
3 ವಿದ್ಯಾರ್ಥಿನಿಯರನ್ನು ಅಮಾನತು ಮಾಡಿ ಉಡುಪಿಯ ಘಟನಾವಳಿಯನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಮುಗ್ದುಂ ಅವರು ಆಕ್ಷೇಪಿಸಿದರು. ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.