ಬೆಂಗಳೂರು: ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆಯವರ ಸನಾತನ ಧರ್ಮದ ಅವಹೇಳನವನ್ನು ಬೆಂಬಲಿಸುವ ಹೇಳಿಕೆಯು ಸಂವಿಧಾನದ ಮೂಲತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಮೊದಲು ಗೌರವಿಸಿ. ಬಳಿಕ ಅದರ ಚರ್ಚೆಗೆ ಮುಂದಾಗಿ. ನಿಮ್ಮದೇ ಸಚಿವರು, ನಿಮ್ಮದೇ ಪಾರ್ಟಿಯವರು, ನಿಮ್ಮದೇ ಒಕ್ಕೂಟದವರ ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿ ಎಂದು ಒತ್ತಾಯಿಸಿದರು.
ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಅವಹೇಳನದ ಹೇಳಿಕೆಗೆ ಬೆಂಬಲ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿಲ್ಲ. ನಿತ್ಯ ಜೀವನದಲ್ಲಿ ಸಂಸ್ಕಾರ ನೀಡುವ ಮಠಗಳಿವೆ. ಇದು ಅವಹೇಳನವಲ್ಲವೇ ಎಂದು ಪ್ರಶ್ನಿಸಿದರು.
ಮತ್ತೊಬ್ಬರು ಸಚಿವರು ಹಿಂದೂ ಶಬ್ದ ಕೊಳಕು ಎಂದಿದ್ದಾರೆ. ಚಿದಂಬರಂ ಅವರು ಹಿಂದೂ ಭಯೋತ್ಪಾದನೆ ಎಂದಿದ್ದಾರೆ. ಇದು ಸಂವಿಧಾನದ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದರು. ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ನಾಶ ಮಾಡಬೇಕು ಎಂದಿದ್ದಾರೆ. ಎಷ್ಟೆÀ್ಟಷ್ಟೋ ಸಂತರು, ಸ್ವಾಮೀಜಿಗಳು, ರಾಮಕೃಷ್ಣ ಪರಮಹಂಸರು, ಸಾವರ್ಕರ್, ಬಾಲಗಂಗಾಧರ ತಿಲಕ್, ಬಸವಣ್ಣ, ಆಚಾರ್ಯರು, ದಾಸರು, ಶಿವಾಜಿ ಮಹಾರಾಜ್ ಹೀಗೆ ಸಾವಿರಾರು ಜನ ಧಾರ್ಮಿಕ ಸುಧಾರಣೆಗೆ ಅವತರಿಸಿದ್ದಾರೆ ಎಂದು ವಿವರಿಸಿದರು.
ಯಾವಾಗ, ಯಾರು ಹುಟ್ಟಿಸಿದರೆಂದು ಗೊತ್ತಾ? ಎಂದು ಪ್ರಶ್ನಿಸಲಾಯಿತು. ಸಂವಿಧಾನದಲ್ಲಿ ಈ ಥರದ ಅಪಕ್ವ- ಅಸಂಬದ್ಧ ಹೇಳಿಕೆಗಳಿಗೆ ನಿಯಂತ್ರಣ ಇಲ್ಲವೇ? ಈ ಥರ ಒಂದು ಧರ್ಮವನ್ನು ಪ್ರಶ್ನಿಸಬಹುದೇ? ಇಷ್ಟೊಂದು ಸನಾತನ, ಪುರಾತನವಾದ, ಮನುಷ್ಯ ಕುಲ ಹುಟ್ಟಿದಾಗಲೇ ಅವತರಿಸಿದ ಈ ಸನಾತನ ಧರ್ಮವನ್ನು ಪ್ರಶ್ನಿಸಿದ್ದಾರೆ. ಇದರಡಿ ಪ್ರಕೃತಿ, ನೀರು, ಬೆಂಕಿ, ಗಾಳಿಯ ಬಳಕೆಯ ಕುರಿತು ತಿಳಿಸಿದ್ದಾರೆ. ಕಾಂಗ್ರೆಸ್ಸಿನ ಈ ಸರಕಾರ ಸಂವಿಧಾನದ ಬಗ್ಗೆ ಚರ್ಚಿಸುವುದು ಅತ್ಯಂತ ಒಳ್ಳೆಯದು ಎಂದು ತಿಳಿಸಿದರು.
ಸಂವಿಧಾನದ ಮುನ್ನುಡಿಯು ಭ್ರಾತೃತ್ವ ಮತ್ತು ಸಮಗ್ರತೆಗೆ ಒತ್ತು ಕೊಡುತ್ತದೆ. ವಿಧಿ 19 (2) ಸಭ್ಯತೆ, ನೈತಿಕತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಹಿಂಸಾಚಾರವನ್ನು ತಪ್ಪಿಸುವ ನಿಟ್ಟಿಸುವುದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹಾಕುತ್ತದೆ. ಆದರೆ, ಯಾವುದೇ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಸನಾತನ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು. ಹಲವರ ಹೇಳಿಕೆಗಳು ಭೂತದ ಬಾಯಲ್ಲಿ ಭಗವದ್ಗೀತೆಯಂತಿದೆ ಎಂದು ಆಕ್ಷೇಪಿಸಿದರು.
ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ, ಹಿಂದೂ ಧರ್ಮವನ್ನು ಕಾಲೆರಾ, ಡೆಂಗ್ಯೂ, ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದ್ದಾರೆ. ಇದನ್ನು ಖಂಡಿಸುವ ಕೆಲಸವೂ ಆಗುತ್ತಿಲ್ಲ. ವಿಧಿ 51/ಎ ಧಾರ್ಮಿಕ ಮತ್ತು ದೇಶದ ವೈವಿಧ್ಯಗಳು ಮತ್ತು ದೇಶದ ಶ್ರೀಮಂತ ಪರಂಪರೆಗಳನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು ಪ್ರೇರೇಪಿಸುತ್ತದೆ. ನಾವು ಕರ್ತವ್ಯಗಳನ್ನು ಮರೆತಿದ್ದೇವೆ ಎಂದು ವಿವರಿಸಿದರು.
ಸಂವಿಧಾನವೇ ನಮ್ಮ ಧರ್ಮ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಕರ್ನಾಟಕ ಸರಕಾರ ಭಾರತದ ಸಂವಿಧಾನದ ಪೀಠಿಕೆ ಓದುವ ಅಭಿಯಾನವನ್ನು ನಡೆಸುತ್ತಿದ್ದು, ಬಿಜೆಪಿ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಇದು ಅತ್ಯಂತ ಅವಶ್ಯಕ ಕಾರ್ಯಕ್ರಮ ಎಂದರು. ಬಿಜೆಪಿ ಸರಕಾರ ಇದ್ದಾಗ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದರು. ಈ ಸಂವಿಧಾನದ ಪೀಠಿಕೆ- ಸಂವಿಧಾನದ ಕುರಿತು ಒಂದು ವಾರ ಸದನದಲ್ಲಿ ಚರ್ಚೆಯೂ ಆಗಿತ್ತು ಎಂದು ವಿವರಿಸಿದರು.
ಇವತ್ತು ನಮ್ಮೆಲ್ಲರಿಗೂ ಮಾತನಾಡುವ, ಬದುಕುವ, ಶಿಕ್ಷಣ ಪಡೆಯುವ, ಜೀವಿಸುವ ಎಲ್ಲ ಹಕ್ಕು ಕೊಟ್ಟಿರುವುದು ನಮ್ಮ ಸಂವಿಧಾನ. ಸಂವಿಧಾನವು ನಮ್ಮ ದೇಶಕ್ಕೆ ಕಾನೂನು, ಕಟ್ಟಳೆಗಳ ನೀತಿ ನಿರ್ಬಂಧಗಳನ್ನು, ಸಮಾನತೆ, ಭ್ರಾತೃತ್ವವನ್ನು ಕೊಟ್ಟಿದೆ. ಇದನ್ನು ಅನೇಕರು ಬೇರೆಬೇರೆ ರೀತಿ ಅರ್ಥ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮುಖಂಡ ಭಾಸ್ಕರ ರಾವ್ ಅವರು ಮಾತನಾಡಿ, ಸಂವಿಧಾನ ಚುನಾಯಿತ ಪ್ರತಿನಿಧಿಗಳಿಗೆ ದೇಶ ನಡೆಸುವ ಕುರಿತು ತಿಳಿಸಿಕೊಡುತ್ತದೆ ಎಂದರಲ್ಲದೆ, ಪ್ರಿಯಾಂಕ್ ಖರ್ಗೆಯವರ ಹೇಳಿಕೆಗಳಿಂದ ರಾಜ್ಯದ ಗೃಹ ಸಚಿವರು ಯಾರು ಎಂಬ ಗೊಂದಲಕ್ಕೆ ಕಾರಣವಾಗಿದೆ. ಗೃಹ ಸಚಿವರ ಸ್ಥಾನವನ್ನು ಹೈಜಾಕ್ ಮಾಡಿ ಫ್ಯಾಕ್ಟ್ ಚೆಕ್ ಯೂನಿಟ್ ಮಾಡುತ್ತಿದ್ದಾರೆ. ಅವರು ಪೊಲೀಸ್ ಇಲಾಖೆಯ ದುರುಪಯೋಗ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹಲವು ಆಂಕರ್ಗಳ ಜೊತೆ ಮಾತನಾಡುವುದಿಲ್ಲ ವಿಪಕ್ಷಗಳ ಒಕ್ಕೂಟದ ಹೇಳಿಕೆಯು ಮಾಧ್ಯಮ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ ಎಂದು ತಿಳಿಸಿದರು. ಇದು ಸಂವಿಧಾನಕ್ಕೆ ವ್ಯತಿರಿಕ್ತ ಎಂದು ಆಕ್ಷೇಪ ಸೂಚಿಸಿದರು. ಮೊಹಬ್ಬತ್ ಕಿ ದುಕಾನ್ ಒಳಗೆ ಇವರನ್ನೇಕೆ ಸೇರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಇದು ತುರ್ತು ಪರಿಸ್ಥಿತಿಯಲ್ಲಿ ಪತ್ರಕರ್ತರ ಮೇಲೆ ನಿಯಂತ್ರಣ ಹೇರಿದಂತಿದೆ ಎಂದು ಟೀಕಿಸಿದರು.
ಸಾಮಾಜಿಕ ಜಾಲತಾಣದ ಸಕ್ರಿಯ ಕಾರ್ಯಕರ್ತರು, ಪತ್ರಕರ್ತರ ಮೇಲೆ ಕೇಸು ದಾಖಲಿಸಲಾಗುತ್ತಿದೆ. ಇದು ಸ್ವಾತಂತ್ರ್ಯದ ಹರಣ ಎಂದು ಆಕ್ಷೇಪಿಸಿದರು. ಸರಕಾರವು ಎಫ್ಐಆರ್ ಮೂಲಕ ಬೊಗಳೋ ನಾಯಿ ಥರ ಹೆದರಿಸಲು ಮುಂದಾಗಿದೆ. ಇದರ ವಿಚಾರದಲ್ಲಿ ತನಿಖೆ ಮಾಡಿ, ಸಾಕ್ಷ್ಯ ಕೊಟ್ಟು ಆರೋಪಪಟ್ಟಿ ದಾಖಲಿಸಲು ನಿಮಗೆ ಸಾಧ್ಯವಿಲ್ಲ ಎಂದು ಸವಾಲೆಸೆದರು.
ನೀವು ಟೀಕೆಗಳಿಗೆ ಭಯ ಪಡುತ್ತೀರಿ. ಅದಕ್ಕಾಗಿ ಭಯಭೀತರನ್ನಾಗಿ ಮಾಡಲು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಹೇರುತ್ತಿದ್ದೀರಿ ಎಂದು ಟೀಕಿಸಿದರು. ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕುವುದು ಸಂವಿಧಾನದ ಮೂಲ ಆಶಯದ ಉಲ್ಲಂಘನೆ ಎಂದರು. 51 ಎ, 19/2 ವಿಧಿಯಡಿ ಮೂಲಭೂತ ಕರ್ತವ್ಯಗಳನ್ನು ನೀಡಲಾಗಿದೆ. ಅದನ್ನು ಓದಿಕೊಳ್ಳಿ ಎಂದು ಆಗ್ರಹಿಸಿದರು.
ಉದಯನಿಧಿ ಮತ್ತು ಪ್ರಿಯಾಂಕ್ ಖರ್ಗೆಯವರಿಗೆ ಕೌಟುಂಬಿಕ ಬಳುವಳಿಯಾಗಿ ಅಧಿಕಾರ ಲಭಿಸಿದೆ. ಸುಲಭವಾಗಿ ಸಿಕ್ಕಿದ್ದಕ್ಕೆ ಯಾವುದೇ ಕಿಮ್ಮತ್ತು ಇರುವುದಿಲ್ಲ. ಅದೇಕಾರಣಕ್ಕೆ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು. ಮುಖ್ಯಮಂತ್ರಿಗಳು ಮತ್ತು ಪ್ರಿಯಾಂಕ್ ಅವರಿಗೆ ಸಂವಿಧಾನದ ಪ್ರತಿಯನ್ನು ಉಡುಗೊರೆಯಾಗಿ ಕೊರಿಯರ್ ಮೂಲಕ ಕಳುಹಿಸಿ ಕೊಡಲಿದ್ದೇವೆ ಎಂದು ತಿಳಿಸಿದರು. ಬೇರೆ ದೇಶ ಆಗಿದ್ದರೆ ರಸ್ತೆಗಿಳಿದು ದಂಗೆ ಏಳುತ್ತಿದ್ದರು. ಸನಾತನಿಗಳು ಶಾಂತಿಪ್ರಿಯರಾದ ಕಾರಣ ಸಹಿಸಿಕೊಂಡು ಸುಮ್ಮನಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಶಾಸಕ ಎನ್.ಮಹೇಶ್, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.