ಸುದ್ದಿಮೂಲ ವಾರ್ತೆ ಸಿಂಧನೂರು, ಫೆ. 12:
ನಗರದ ಸರಕಾರಿ ಮಹಾವಿದ್ಯಾ ಲಯದಲ್ಲಿರುವ ಸೌಲಭ್ಯಗಳು, ಶೈಕ್ಷಣಿಕ ಪ್ರಗತಿ ಕುರಿತಂತೆ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ರಾಷ್ಟ್ರೀಯ ಪರೀಕ್ಷೆ ಹಾಗೂ ಮಾನ್ಯತಾ ತಂಡ(ನ್ಯಾಕ್) ಪ್ರಶಂಸೆ ವ್ಯಕ್ತಪಡಿಸಿದೆ.
ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನ್ಯಾಕ್ ಕಮಿಟಿ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ನ್ಯಾಕ್ ಕಮಿಟಿ ಅಧ್ಯಕ್ಷ ಡಾ.ಶಿರೀಶ್ ಕುಲರ್ಣಿ, ನ್ಯಾಕ್ ಕಮಿಟಿಯ ಸದಸ್ಯನಾಗಿ, ಅಧ್ಯಕ್ಷನಾಗಿ ದೇಶದಲ್ಲಿ ನೂರಾರು ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಆದರೆ ಎಲ್ಲಿಯೂ ಇಂತಹ ಸಾಂಸ್ಕೃತಿಕ ಪರಿಸರ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವಿನ ಮಧುರ ಬಾಂಧವ್ಯ, ಕಾಲೇಜಿನ ವಿಶಾಲವಾದ ಪ್ರಾಂಗಣ, ಗಣನೀಯ ಪ್ರಮಾಣದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ನಿರೀಕ್ಷೆಗೂ ಮೀರಿದ ಫಲಿತಾಂಶ. ಹೀಗೆ ಎಲ್ಲ ವಿಧದ ಪ್ರಗತಿಯ ಮುನ್ನೋಟಗಳು ನನ್ನನ್ನು ಬೆರಗುಗೊಳಿಸಿವೆ ಎಂದು ಅವರು ವಿವರಿಸಿದರು.
ಕಾಲೇಜಿಗೆ ವಿವಿಧ ಸೌಕರ್ಯಗಳನ್ನು ಒದಗಿಸಿ ಶಿಕ್ಷಣದ ಪ್ರಗತಿಗೆ ಸಹಕಾರಿಯಾಗಿರುವ ಶಾಸಕ ವೆಂಕಟರಾವ್ ನಾಡಗೌಡ ಮತ್ತು ದಕ್ಷ ಆಡಳಿತ ಮಾಡುತ್ತಿರುವ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಅವರ ಸೇವೆಯೂ ಅವಿಸ್ಮರಣೀಯವಾಗಿದೆ ಎಂದು ಶ್ಲಾಘಿಸಿದ ಅವರು ಪ್ರಸ್ತುತ ಕಾಲೇಜಿನ ಚಲನೆ ಇದೇ ರೀತಿ ಮುಂದುವರೆದರೆ, ಮುಂದೊಂದು ದಿನ ಈ ಕಾಲೇಜು ಬಹುದೊಡ್ಡ ವಿದ್ಯಾಸಂಸ್ಥೆಯಾಗಿ ಮಾರ್ಪಾಡಾಗುವದರಲ್ಲಿ ಸಂಶಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಬೀಳ್ಕೊಡುಗೆ:
ನ್ಯಾಕ್ ಕಮಿಟಿಯ ಸದಸ್ಯರು ಕಾಲೇಜಿನ ಸಮಗ್ರ ಪ್ರಗತಿಯ ಮಾದರಿ ವೀಕ್ಷಿಸಿ ಶುಕ್ರವಾರ ಸಂಜೆ ನಿರ್ಗಮಿಸುತ್ತಿರುವಾಗ ಕಾಲೇಜಿನ ವಿದ್ಯಾಥಿಗಳು ಅವರನ್ನು ಆಲಾಯಿ ಕುಣಿತದೊಂದಿಗೆ ಕಾಲೇಜಿನಿಂದ ಮುಖ್ಯ ರಸ್ತೆಯವರೆಗೆ ಬೀಳ್ಕೊಟ್ಟರು.
ನ್ಯಾಕ್ ಕಮಿಟಿಯ ಸದಸ್ಯರಾದ ಪಂಜಾಬಿನ ಅಮರದೀಪ್ ಗುಪ್ತ, ತಮಿಳು ನಾಡಿನ ಫ್ರೊ.ಮುರಗನ್, ಕಾಲೇಜಿನ ಅಭಿ ವೃದ್ಧಿ ಮಂಡಳಿ ಸದಸ್ಯರು, ಉಪನ್ಯಾಸಕರು, ಎನ್ಸಿಸಿ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಧರರು ಸೇರಿದಂತೆ ಕಾಲೇ ಜು ಸಿಬ್ಬಂದಿ ಭಾಗವಹಿಸಿದ್ದರು.