ಸುದ್ದಿಮೂಲ ವಾರ್ತೆ
ಮಾಲೂರು, ಏ.18 : ತಾಲೂಕಿನಲ್ಲಿ ಸುಮಾರು 15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗದೆ ಭ್ರಷ್ಟಾಚಾರ, ಲಂಚಗುಳಿತನ ತಾಂಡವಾಡುತ್ತಿದ್ದು, ಅದನ್ನು ಹೋಗಲಾಡಿಸಿ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಂಬಿಗಾನಹಳ್ಳಿ ನಾರಾಯಣಮ್ಮ ತಿಳಿಸಿದರು.
ನಾಮಪತ್ರ ಸಲ್ಲಿಸಲು ತಮ್ಮ ಸ್ವ ಗ್ರಾಮದಿಂದ ಎತ್ತಿನ ಗಾಡಿಯಲ್ಲಿ ಮೆರವಣಿಗೆಯ ಮೂಲಕ ಪಟ್ಟಣದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ಬಡವರು, ದೀನದಲಿತರು, ರೈತರ ಕಷ್ಟಗಳಿಗೆ ಇದುವರೆಗೂ ಚುನಾಯಿತರಾಗಿರುವ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಯಾವುದೇ ಸಾರ್ವಜನಿಕ ಕೆಲಸ ಕಾರ್ಯಗಳು ಆಗುತ್ತಿಲ್ಲ. ರೈತರ ಪಿ ನಂಬರ್ ದುರಸ್ತಿ, ಪಾವತಿ ಖಾತೆ ಸೇರಿದಂತೆ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತಿದ್ದು. ಕೂಲಿ ನಾಲಿ ಮಾಡುವ ಸಾಮಾನ್ಯ ಜನರು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಕಂಗಾಲಾಗಿದ್ದಾರೆ. ಇದನ್ನು ಗಮನಿಸಿದ ನಾನು ಈ ಚುನಾವಣೆಯಲ್ಲಿ ಜನರ ಕಷ್ಟಗಳನ್ನು ನಿವಾರಿಸಲು ಬದಲಾವಣೆಯಗೋಸ್ಕರ ನಾನು ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು . ತಾಲೂಕಿನ ಎಲ್ಲಾ ಜನರು ಆಶೀರ್ವಾದ ಮಾಡಿ ಶಾಸಕರನ್ನಾಗಿ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ, ನಾರಾಯಣಸ್ವಾಮಿ, ನಿರ್ಮಲ, ಮೋಹನ್ ಸೇರಿದಂತೆ ಇನ್ನಿತರರು ಇದ್ದರು.