ಸುದ್ದಿಮೂಲ ವಾರ್ತೆ ಬೆಂಗಳೂರು, ಫೆ. 18:
ತೆಲುಗು ನಟ, ನಗರದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂದಮೂರಿ ತಾರಕರತ್ನ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ತಾರಕರತ್ನ ಅವರಿಗೆ 39 ವರ್ಷ ವಯಸ್ಸಾಗಿತ್ತು. ತಾರಕರತ್ನ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ. ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ, ಅವರ ನಿಧನ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ದಿಗ್ಭ್ರಮೆ ಮೂಡಿಸಿದೆ. ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇತ್ತೀಚೆಗೆ ಕುಪ್ಪನಲ್ಲಿ ನಡೆದ ‘ಯುವಗಳಂ’ ಪಾದಯಾತ್ರೆಯಲ್ಲಿ ಹೃದಯಸ್ಥಂಭನವಾಗಿ ಕುಸಿದು ಬಿದ್ದಿದ್ದ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ 23 ದಿನಗಳಿಂದ ಕೋಮಾದಲ್ಲಿದ್ದ ತಾರಕರತ್ನ ಅವರನ್ನು ಉಳಿಸಿಕೊಳ್ಳಲು ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.
ತಾರಕರತ್ನ ಅವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅವರ ತಂದೆ ನಂದಮೂರಿ ಮೋಹನಕೃಷ್ಣ, ಅವರ ಸಹೋದರ ಬಾಲಕೃಷ್ಣ, ರಾಮಕೃಷ್ಣ, ಜೂನಿಯರ್ ಎನ್ಟಿಆರ್ ಸಹಿತ ಕುಟುಂಬದ ಹಲವರು ಬೆಂಗಳೂರಿನಲ್ಲಿಯೇ ಉಳಿದಿಕೊಂಡಿದ್ದರು.