ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 1: ಅನ್ನ ಯೋಜನೆಯಡಿ ವರ್ಷಕ್ಕೆ 3 ಉಚಿತ ಸಿಲಿಂಡರ್, ರಾಜ್ಯದ ಪ್ರತಿ ಮಹಾನಗರ ಪಾಲಿಕೆ ವಾರ್ಡ್ಗಳಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ, ಪೋಷಣೆ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ಹಾಲು ಮತ್ತು ಐದು ಕೆಜಿ ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್.
ಇದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನರಿಗೆ ನೀಡಲಾದ ಪ್ರಣಾಳಕೆಯ ಪ್ರಮುಖ ಅಂಶಗಳು. ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಬಿಜೆಪಿ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಬಿಡುಗಡೆ ಮಾಡಲಾಯಿತು.
ಅನ್ನ, ಅಕ್ಷರ, ಆರೋಗ್ಯ, ಆದಾಯ, ಅಭಯ, ಅಭಿವೃದ್ಧಿಯ ಆರು ವಿಭಾಗದಡಿ ಪ್ರಣಾಳಿಕೆ ಸಿದ್ಧಗೊಂಡಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಇದು ಸಿದ್ಧವಿದೆ. ಅಮೃತ ಕಾಲಕ್ಕೆ ಪೂರಕ ಪ್ರಣಾಳಿಕೆ. ಪವರ್ಫುಲ್ ಡಬಲ್ ಎಂಜಿನ್ ನಮ್ಮದು. ಜನಸೇವಕ ಯೋಜನೆಯಡಿ ಕೇಂದ್ರ- ರಾಜ್ಯ ಯೋಜನೆಗಳ ಅನುಷ್ಠಾನ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದರು.
ಅಭಯದಡಿ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿ ಮಾಡಲಿದ್ದೇವೆ. ಅರ್ಹರಿಗೆ ನಿವೇಶನ ವಿತರಣೆ, ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಸ್ಥಾಪನೆ, ಅಪಾರ್ಟ್ಮೆಂಟ್ ಸಮಸ್ಯೆ ಪರಿಹಾರ ಮಾಡಲಿದ್ದೇವೆ. ಅಕ್ಷರದಡಿ ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಜಾರಿ ಮಾಡಲಿದ್ದೇವೆ. ಯುವಕರಿಗೆ ಪ್ರೋತ್ಸಾಹ ಕೊಡಲಾಗುವುದು. ಆರೋಗ್ಯದಡಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಉತ್ತೇಜನ ನೀಡುತ್ತೇವೆ ಎಂದು ತಿಳಿಸಿದರು.
ಅಭಿವೃದ್ಧಿಗಾಗಿ ಸ್ಟೇಟ್ ಕ್ಯಾಪಿಟಲ್ ರೀಜನ್ ಸ್ಥಾಪಿಸುತ್ತೇವೆ. ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುತ್ತೇವೆ. 30 ಸಾವಿರ ಕೋಟಿಯನ್ನು ಅಗ್ರಿಕಲ್ಚರ್ ಫಂಡ್ ಸ್ಥಾಪಿಸಿ ಕೃಷಿ ಉತ್ತೇಜನ ನೀಡುತ್ತೇವೆ ಎಂದು ವಿವರಿಸಿದರು. ಆದಾಯದಡಿ 1500 ಕೋಟಿಯನ್ನು ಮೀಸಲಿಡಲಾಗುತ್ತದೆ. ಕರ್ನಾಟಕವನ್ನು ಪ್ರವಾಸಿ ತಾಣವಾಗಿ ಮಾಡಲಿದ್ದೇವೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಕೃತಿ ರಕ್ಷಣೆಗಾಗಿ ಗೋರಕ್ಷಣಾ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ. ಅಂಜನಾದ್ರಿ, ಅನುಭವ ಮಂಟಪಗಳ ಅಭಿವೃದ್ಧಿ, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಜನರ ಭಾವನೆ ಆಧರಿಸಿ ಪ್ರಜಾಪ್ರಣಾಳಿಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕಳೆದ ಕೆಲವು ತಿಂಗಳುಗಳಿಂದ ಜನರ ಅಭಿಮತ, ತಜ್ಞರ ಸಲಹೆಯೊಂದಿಗೆ ಜನರ ಭಾವನೆ ಆಧರಿಸಿ ಪ್ರಜಾಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಕಳೆದ ಬಾರಿ ಕೋವಿಡ್ ನಿರ್ವಹಣೆ, ಆರ್ಥಿಕ ಕುಸಿತ, ಜನಜೀವನ ಅಸ್ತವ್ಯಸ್ಥ ಇದ್ದರೂ ಅದನ್ನು ನಿಭಾಯಿಸಿದ್ದೇವೆ. ಎಲ್ಲ ಅನುಭವಗಳನ್ನು ಕ್ರೋಡೀಕರಿಸಿ ಪ್ರಣಾಳಿಕೆ ನೀಡಿದ್ದೇವೆ. ಕೃಷಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ ಎಂದು ವಿವರಿಸಿದರು.
ಕಿಸಾನ್ ಸಮ್ಮಾನ್ನಿಂದ ರೈತ ವಿದ್ಯಾನಿಧಿ ವರೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಶೂನ್ಯ ಬಡ್ಡಿ ಸಾಲದ ಪ್ರಮಾಣ ಹೆಚ್ಚಳ, ಆವರ್ತ ನಿಧಿ ಮಿತಿ ಹೆಚ್ಚಳ, ರೈತರಿಗೆ ವಿಮೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ, ಅಗ್ರೊ ಫಂಡ್ ಆರಂಭ, ಸಿರಿಧಾನ್ಯಕ್ಕೆ ಒತ್ತು- ಮಹತ್ವ ಕೊಡುವುದು, ಹೈನುಗಾರಿಕೆ, ಮೀನುಗಾರಿಕೆಗೆ ಮಹತ್ವ ಕೊಡಲಾಗಿದೆ ಎಂದು ತಿಳಿಸಿದರು.
ಸಬ್ ಕಾ ಸಾಥ್ ಚಿಂತನೆಯಡಿ ಬಡವರ ಕಲ್ಯಾಣಕ್ಕೆ ಮಹತ್ವ ಕೊಟ್ಟಿದ್ದೇವೆ. ನಗರ ಪ್ರದೇಶದಲ್ಲಿ 5 ಲಕ್ಷ ಮತ್ತು ಗ್ರಾಮೀಣ ಪ್ರದೇಶದಲ್ಲಿ 10 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು. ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀಟರ್ ಹಾಲು, 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ ಸೇರಿ 10 ಕೆಜಿ ಪಡಿತರ ವಿತರಣೆ ಮಾಡಲಾಗುವುದು. ಘೋಷಣೆಗಾಗಿ ಘೋಷಣೆ, ಚುನಾವಣಾ ಘೋಷಣೆ ಇದಲ್ಲ. ಆಯುಷ್ಮಾನ್ ವಿಮೆಯನ್ನು 10 ಲಕ್ಷಕ್ಕೆ ಏರಿಸುತ್ತೇವೆ. ಹಿರಿಯ ನಾಗರಿಕರ ಆರೋಗ್ಯ ತಪಾಸಣೆ, ತಾಲ್ಲೂಕಿನಲ್ಲಿ ಕಿಮೋಥೆರಪಿ ಡಯಾಲಿಸಿಸ್, ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಸಚಿವ ಮತ್ತು ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಡಾ. ಕೆ. ಸುಧಾಕರ್ ಅವರು ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಬೂತ್ ಅಭಿಯಾನ, ಕ್ಷೇತ್ರಗಳ ಸಭೆಗಳಲ್ಲಿ ಸೇರಿ 6 ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿತ್ತು. ಪ್ರಣಾಳಿಕೆ ಸಿದ್ಧಪಡಿಸುವ ಸಭೆಯಲ್ಲಿ ಹಲವು ಕೇಂದ್ರದ ಸಚಿವರು, ವಿಷಯ ತಜ್ಞರು ಭಾಗವಹಿಸಿದ್ದರು. 900 ಸಲಹೆಗಳನ್ನು ತಜ್ಞರಿಂದ ಸ್ವೀಕರಿಸಿದ್ದೇವೆ. 50 ಸೆಕ್ಟೋರಲ್ ತಜ್ಞರೂ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋóಷಿ, ಎ. ನಾರಾಯಣಸ್ವಾಮಿ, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯದ ಸಚಿವರಾದ ಆರ್.ಅಶೋಕ್, ಬಿ.ಶ್ರೀರಾಮುಲು, ಡಾ. ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಈಶ್ವರಪ್ಪ, ಅರವಿಂದ ಲಿಂಬಾವಳಿ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.
ಅತ್ಯಂತ ಒಳ್ಳೆಯ ಪ್ರಣಾಳಿಕೆ ಇದಾಗಿದೆ. ಎಲ್ಲ ವರ್ಗದ ಜನರಿಗೆ ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಇದರ ಮಾಹಿತಿಯನ್ನು ಜನರಿಗೆ ನೀಡಿ ಮತ್ತೆ ಬಿಜೆಪಿ 125- 130 ಸೀಟು ಗೆದ್ದು ಸರಕಾರ ರಚಿಸಲಿದೆ.
ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಬಿಜೆಪಿ ಪ್ರಣಾಳಿಕೆಯ ಮುಖ್ಯ ಅಂಶಗಳು:
* ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ವಾರ್ಷಿಕ ಮೂರು ಉಚಿತ ಸಿಲಿಂಡರ್ ಗ್ಯಾಸ್ ವಿತರಣೆ (ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ)
* ಮಹಾನಗರ ಪಾಲಿಕೆಗಳ ಪ್ರತಿ ವಾರ್ಡ್ಗಳಲ್ಲಿ ಅಟಲ್ ಆಹಾರ ಕೇಂದ್ರ
* ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಉಚಿತ ಹಾಲು, ಪ್ರತಿ ತಿಂಗಳು 5 ಕೆಜಿ ಸಿರಿ ಅನ್ನ, ಸಿರಿ ಧಾನ್ಯ ವಿತರಣೆ
* ಏಕರೂಪ ನಾಗರಿಕ ಸಹಿತೆ ಜಾರಿಯ ಭರವಸೆ
* ಸರ್ವರಿಗೆ ಸೂರು ಯೋಜನೆ
* ಒನಕೆ ಓಬವ್ವ ಸಾಮಾಜಿಕ ನ್ಯಾಯನಿಧಿ ಯೋಜನೆ
* ವಿಶ್ವೇಶ್ವರಯ್ಯ ವಿದ್ಯಾ ಯೋಜನೆ – ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೇಲ್ದರ್ಜೆ
* ಸಮನ್ವಯ ಯೋಜನೆ -ಎಸ್ಎಂಇ ಮತ್ತು ಐಟಿಐ ನಡುವೆ ಸಮನ್ವಯ
* ಐಎಎಸ್/ಕೆಎಎಸ್/ಬ್ಯಾಂಕಿಂಗ್/ಸರ್ಕಾರಿ ಉದ್ಯೋಗಕ್ಕಾಗಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಧನಸಹಾಯ
* ಮಿಷನ್ ಸ್ವಾಸ್ತ್ಯ ಕರ್ನಾಟಕದ ಅಡಿಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿ
* ಹಿರಿಯ ನಾಗರೀಕರಿಗೆ ವಾರ್ಷಿಕ ಉಚಿತ ಮಾಸ್ಟರ್ ಹೆಲ್ತ್ ಚೆಕಪ್
* ಮುಂದಿನ ತಲೆಮಾರಿಗೆ ಬೆಂಗಳೂರಿನ ಅಭಿವೃದ್ಧಿ
* ವಿದ್ಯುನ್ಮಾನ ವಾಹನಗಳ ಹಬ್ ಆಗಿ ಕರ್ನಾಟಕ ಪರಿವರ್ತನೆ
* 30 ಸಾವಿರ ಕೋಟಿ ರೂ. ಕೆ ಅಗ್ರಿ ಫಂಡ್ ಸ್ಥಾಪನೆ
* ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್, ಕಾವೇರಿ ಸರ್ಕ್ಯೂಟ್, ಗಂಗಾಪುರ ಕಾರಿಡಾರ್ ನಿರ್ಮಾಣಕ್ಕೆ 1500 ಕೋಟಿ ರೂ.
* ಬೆಂಗಳೂರು ಹೊರತು ಪಡಿಸಿ 10 ಲಕ್ಷ ಉದ್ಯೋಗಗಳ ಸೃಷ್ಟಿ
* ಅಪಾರ್ಟ್ಮೆಂಟ್ ಓನರ್ಶಿಫ್ ಆಕ್ಟ್ ತಿದ್ದುಪಡಿಯ ಭರವಸೆ