ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಜೂ.15: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ಜಗತ್ತಿನಲ್ಲಿ ಯುವ ಸಮುದಾಯದ ಕೃಷಿ ಕ್ಷೇತ್ರದಿಂದ ದೂರ ಹೋಗುತ್ತಿರುವುದು ವಿಷಾದನೀಯ ಸಂಗತಿ ಎಂದು ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷರಾದ ನಂದಿನಿಕುಮಾರ್ ಹೇಳಿದರು.
ಸೂಲಿಬೆಲೆ ಹೋಬಳಿಯ ಬೇಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ, ಬೇಗೂರು ಪ್ರೌಢಶಾಲೆ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಅಂಕುರ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂಸ್ಥೆಯಿಂದ ಈ ಕಾರ್ಯಕ್ರಮ ನಾಲ್ಕು ತಿಂಗಳ ಕಾಲ ಜಾರಿಯಲ್ಲಿದ್ದು ಪ್ರತಿ ಶನಿವಾರ
ನೆಡೆಯಲಿದ್ದು ಕೃಷಿ ತಂತ್ರಜ್ಞಾನ ಕುರಿತಾದ ತರಗತಿಗಳನ್ನು ಏರ್ಪಡಿಸಿ ಕೃಷಿ ಕ್ಷೇತ್ರದ ಬಗ್ಗೆ ಪರೀಕ್ಷೆಗಳನ್ನು ನೆಡೆಸಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಹಾಗೂ ಪ್ರೋತ್ಸಾಹಕರ ಬಹುಮಾನಗಳ ಮೂಲಕ
ಕೃಷಿ ಕ್ಷೇತ್ರದ ಬಗ್ಗೆ ಒಲವು ಮೂಡಿಸಲಾಗುವುದು ಎಂದು ಹೇಳಿದರು.
ಬೇಗೂರು ಪ್ರೌಢಶಾಲೆ ಮುಖ್ಯಶಿಕ್ಷಕಿ ಸರಸ್ವತಿ ಕೆ ಹೆಗಡೆ ಮಾತನಾಡಿ, ಕೃಷಿ ತಂತ್ರಜ್ಞರ ಸಂಸ್ಥೆಯ ವತಿಯಿಂದ ಈ ದಿನ ಗ್ರಾಮೀಣ ಮಕ್ಕಳಿಗೆ ಕೃಷಿ ಕ್ಷೇತ್ರದ ಅವಶ್ಯಕತೆ, ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಹಾಗೂ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಷಯವಾರು ಮಕ್ಕಳಲ್ಲಿ ಜ್ಞಾನ
ತುಂಬಿರುವುದು ಹರ್ಷದ ವಿಚಾರ ಎಂದು ಹೇಳಿದರು.
ಕೃಷಿತಂತ್ರಜ್ಞರ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ. ಬಿ.ಕೃಷ್ಣಮೂರ್ತಿ, ಗ್ರಾಮೀಣ ಯುವಕರಲ್ಲಿ ಕೃಷಿಯ ಬಗ್ಗೆ ನಿರಾಸಕ್ತಿ ಕಾಣುತ್ತಿದೆ ಉನ್ನತ ಶಿಕ್ಷಣದ ಪ್ರಭಾವದಿಂದ ರೈತಾಪಿ ವರ್ಗದ ಮಕ್ಕಳು ಮರಳಿ ಕೃಷಿ ಕ್ಷೇತ್ರಕ್ಕೆ ಬರುತ್ತಿಲ್ಲ ಇದು ಆಹಾರ ಉತ್ಪನ್ನಗಳ ಮೇಲೆ ಬಾರಿ ಪರಿಣಾಮ ಬೀರಲಿದೆ ಎಂದು ಹೇಳಿದರು.
ಸಂಸ್ಥೆಯ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಾ. ಎ.ಬಿ.ಪಾಟೀಲ್, ಕಾರ್ಯದರ್ಶಿ ವಿ.ಕೆ.ಕಮತರ, ಜಂಟಿ
ಕಾರ್ಯದರ್ಶಿ ಡಾ.ಬಿ.ಕೃಷ್ಣಮೂರ್ತಿ, ಗ್ರಾ.ಪಂ.ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ಪ್ರಿಯಾಂಕರವಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ದೀಲಿಪ್ಕುಮಾರ್, ಕೃಷಿ ವಿಸ್ತರಣೆ ಮತ್ತು ರೈತ ಶಿಕ್ಷಣ ಸಮಿತಿ ಸದಸ್ಯ ಬಿ.ಹೆಚ್.ಪಿಂಜಾರ್, ಸದಸ್ಯರಾದ ಬೈರೇಗೌಡ, ಮಲ್ಲಿಕಾಅವಿನ್, ಅಶ್ವಿನಿಸುರೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸದಸ್ಯರುಗಳು, ಸಹ ಶಿಕ್ಷಕರುಗಳು ಇದ್ದರು.