ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ. 31 : ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಜಾವೀದಾ ನಸೀಮಾ ಖಾನಂ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ಶಿಕ್ಷಣ,ಆರೋಗ್ಯ,ಅರಣ್ಯ,ಕೃಷಿ, ರೇಷ್ಮೆ,ತೋಟಗಾರಿಕೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಪಶು ವೈದ್ಯಕೀಯ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯನ್ನು ಮಂಡಿಸಿದರು.
ಬಳಿಕ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ತಾಲ್ಲೂಕಿನ ತಲಕಾಯಲಬೆಟ್ಟದ ಬಳಿ ಕೀಟಶಾಸ್ತ್ರಜ್ಞರು ಪರೀಕ್ಷಿಸಿದ ಸೊಳ್ಳೆಯೊಂದರಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಲಕಾಯಲಬೆಟ್ಟ, ವೆಂಕಟಾಪುರ,ದಿ ಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಮುಂತಾದೆಡೆ ಗರ್ಭಿಣಿಯರು ಸೇರಿದಂತೆ ಹಲವಾರು ಗ್ರಾಮಸ್ಥರ ರಕ್ತ ಪರೀಕ್ಷೆ ಮಾಡಿದ್ದೇವೆ ಹಾಗೂ ಅದೃಷ್ಟವಶಾತ್ ಯಾರಲ್ಲೂ ಜಿಕಾ ವೈರಸ್ ಕಂಡುಬಂದಿಲ್ಲ. ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿಗಳನ್ನು ಅವರ ಕಲಿಕೆಯ ಆಧಾರದಲ್ಲಿ ಎ ಬಿ ಮತ್ತು ಸಿ ವರ್ಗಗಗಳೆಂದು ವಿಂಗಡಿಸಿ ಬಿ ಮತ್ತು ಸಿ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಜಾವೀದಾ ನಸೀಮಾ ಖಾನಂ ಮಾತನಾಡಿ, ಕಳೆದ ವಾರ ಶಿಡ್ಲಘಟ್ಟಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಭೇಟಿ ನೀಡಿದಾಗ ಶಿಡ್ಲಘಟ್ಟದಲ್ಲಿ ಸೂಕ್ತವಾಗಿ ಕಸ ವಿಲೇವಾರಿ ಆಗುತ್ತಿಲ್ಲ.ಸ್ವಚ್ಚತೆ ಇಲ್ಲಾ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆ,ಬಿಸಿಎಂ ಹಾಸ್ಟೆಲ್ ಇನ್ನಿತರೆ ಕಡೆ ಭೇಟಿ ನೀಡಿದ್ದಾಗ ಅವರ ಕಣ್ಣಿಗೆ ಸ್ವಚ್ಚ ನೈರ್ಮಲ್ಯದ ಕೊರತೆ ಕಂಡಿದೆಯಲ್ಲದೆ ಸಾರ್ವಜನಿಕರಿಂದಲೂ ಈ ಬಗ್ಗೆ ದೂರುಗಳು ಬಂದಿದ್ದು ಅದನ್ನು ಅವರು ಸರಕಾರದ ಮಟ್ಟದಲ್ಲಿ ಪ್ರಸ್ತಾಪಿಸಿದ್ದಾರೆ. ಎಲ್ಲರೂ ಸಹ ಸ್ವಚ್ಚತೆ ಬಗ್ಗೆ ಹೆಚ್ಚಿನ ಒತ್ತು ನೀಡಿ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸ್ವಚ್ಚತೆ ನೈರ್ಮಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು,ರೇಷ್ಮೆ ಇಲಾಖೆಯ ಎಂ.ಸಿ.ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಗಧೀಶ್, ಬಿಸಿಎಂ ಇಲಾಖೆ ಸಂಗಪ್ಪ ಪಾಟೀಲ್,ಬಿಸಿಯೂಟದ ಆಂಜನೇಯಲು ಸಭೆಯಲ್ಲಿ ಹಾಜರಿದ್ದರು.