ಸುದ್ದಿಮೂಲ ವಾರ್ತೆ
ಕೋಲಾರ, ಜೂ 29 : ಗ್ರಾಮ ಪಂಚಾಯಿತಿಗಳು ಜನರ ಸೌಲಭ್ಯಕ್ಕೆ ಲಭ್ಯವಾಗುತ್ತಿದ್ದು, ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಪ್ರಾಮಾಣಿಕತೆಯಿಂದ ಆಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ತಿಳಿಸಿದರು.
ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹೋಬಳಿ ಕೇಂದ್ರದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿದ್ದು ಜನರಿಗೆ
ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಹಾಗೆಯೇ, ಗ್ರಾ.ಪಂ ಕಟ್ಟಡದಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಪ್ರತಿ ಹಳ್ಳಿಗೂ ಮಾಹಿತಿ ನೀಡುವ ಕೆಲಸ ಆಗಬೇಕು ಎಂದುತಿಳಿಸಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿಗಳಿಗೆ ಅಭಿವೃದ್ಧಿಗಾಗಿ ಶೇ.80ರಷ್ಟು ಅನುದಾನ ಕೇಂದ್ರದಿಂದ ಸಿಗಲಿದೆ. ನಾಗರಿಕರು ಉತ್ತಮ ಸೇವೆಗಳನ್ನು ಗ್ರಾ.ಪಂನಿಂದ ಪಡೆಯಬೇಕು. ಜನಪ್ರತಿನಿಧಿಗಳು ಚುನಾವಣೆ ನಂತರ ಮತದಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿಕೊಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಗ್ರಾ.ಪಂ. ವತಿಯಿಂದ ಸರ್ಕಾರದ
ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಒದಗಿಸುವ ಕೆಲಸ ಇಲ್ಲಿಂದಲೇ ಆಗಬೇಕು. ಕಟ್ಟಡದ ಬಾಕಿ ಕೆಲಸಗಳಿಗೆ ಐದು ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್ ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ, ತಾಪಂ ಇಒ ಪಿ.ಮುನಿಯಪ್ಪ, ಹಿರಿಯ ಮುಖಂಡ ವಕ್ಕಲೇರಿ ರಾಮು,ಕೆಪಿಸಿಸಿ ಸದಸ್ಯೆ ನಂದಿನಿ ಪ್ರವೀಣ್, ವಕ್ಕಲೇರಿ ರಾಜಪ್ಪ, ಸೊಸೈಟಿ ಕೆ.ಆನಂದ್ ಕುಮಾರ್, ಸೀಸಂದ್ರ ಗೋಪಾಲಗೌಡ, ಚಂಜಿಮಲೆ ರಮೇಶ್, ಅಂಬರೀಶ್, ಮುರಳಿಗೌಡ, ಇನಾಯತ್, ಪಂಚಾಯತಿ ಉಪಾಧ್ಯಕ್ಷೆ ಚಿನ್ನಮ್ಮ, ಸದಸ್ಯರು, ಮಾಜಿ ಅಧ್ಯಕ್ಷರು, ಪಿಡಿಒ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.