ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ನ.6: ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಮ್ಮಿಕೊಂಡಿರುವುದರಿಂದ ಅರ್ಥ ಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಸೂಚಿಸಿದರು.
ಸೋಮವಾರ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸುವ ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಮತದಾರರ ದಿನಾಚರಣೆಯನ್ನು ಆಚರಿಸಬೇಕು ಎಂದರು.
ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆಗಳನ್ನು ನ. 20 ರಿಂದ 22 ವರೆಗೆ, ಜಿಲ್ಲಾ ಮಟ್ಟದಲ್ಲಿ ನ. 29 ರಿಂದ ಡಿಸೆಂಬರ್ 01 ವರೆಗೆ ಸ್ಪರ್ಧೆಗಳನ್ನು ವಿಭಾಗವಾರು ಆಯೋಜಿಸಿ ವಿಜೇತರ ಪಟ್ಟಿಯನ್ನು ಹಾಗೂ ಸ್ಪರ್ಧೆಗಳನ್ನು ವೀಕ್ಷಿಸಿದ ವೀಕ್ಷಕರ ಮಾಹಿತಿಯನ್ನು ಉಪನಿರ್ದೇಶಕರು ಹಾಗೂ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಕಚೇರಿಗೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಮಟ್ಟದ ಇ.ಎಲ್.ಸಿ. ತರಬೇತುದಾರ ಸತೀಶ್ ಕುಮಾರ್ ಮಾತನಾಡಿ, ಸ್ಪರ್ಧೆಗಳ ವಿವರ, ನಿಗದಿಪಡಿಸಿರುವ ವಿಷಯಗಳು, ಬಹುಮಾನಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಸಭೆಗೆ ವಿವರಣೆಯನ್ನು ನೀಡಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪದವಿ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.