ಸುದ್ದಿಮೂಲ ವಾರ್ತೆ ಲಿಂಗಸುಗೂರು, ಫೆ. 11:
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಪರೇಷನ್ ಕಮಲದ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದು ಅನೈತಿಕವಾಗಿ ಆಡಳಿತ ನಡೆಸುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ ಆರೋಪಿಸಿದರು.
ಶನಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ ಆಡಳಿತ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 15-20 ಪರ್ಸೆಂಟೇಜ್ ಸರ್ಕಾರವೆಂದು ಲೇವಡಿ ಮಾಡಿದ್ದರು. ಆದರೆ ಇದೀಗ ತಮ್ಮದೇ ಆದ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ದಂಧೆಯಲ್ಲಿ ತೊಡಗಿದೆ ಎಂದು ನೇರವಾಗಿ ಆರೋಪಿಸಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಬಂಧಿಸಲಾಗಿದೆ.
ರಾಜ್ಯದ ನಾನಾ ಕ್ಷೇತ್ರಗಳ ಶಾಸಕರಾದ ಬಳಿಕ ಬೆಂಗಳೂರಲ್ಲಿ ಮನೆ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ವಿನಃ ತಮ್ಮ ತಮ್ಮ ಕ್ಷೇತ್ರದ ಜನರ ಆಶೋತ್ತರಗಳ ಮತ್ತು ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ. ಅಧಿವೇಶನದ ವೇಳೆ ಬಹುತೇಕ ಶಾಸಕರು ಸದನಕ್ಕೆ ಗೈರು ಹಾಜರಾಗುತ್ತಾರೆ. ನಾನಾ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚನೆಗೆ ಗಮನ ಹರಿಸುತ್ತಿದೆಯೆಂದು ಟೀಕಿಸಿದರು.
ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕುಡಿಯುವ ನೀರು, ವಸತಿ, ಶಿಕ್ಷಣ, ಆರೋಗ್ಯ ಸೇರಿ ನಾನಾ ಯೋಜನೆಗಳ ಜಾರಿಗೆ ಸಾಲ ಮಾಡದೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಇದಕ್ಕೆ ಅಡ್ಡಿ ಪಡಿಸುತ್ತಿದೆ. ಆದರೆ ಇದಕ್ಕೆ ಹೆದರದೆ ಸಮರ್ಥವಾಗಿ ಆಪ್ ಸರ್ಕಾರ ನಡೆಸುತ್ತಿದೆ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ರೋಸಿ ಹೋದ ಜನತೆ ಅತ್ಯಂತ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ಜನತೆ ಬದಲಾವಣೆ ಬಯಸುತ್ತಿದ್ದಾರೆ. ಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ದೇಶಾದ್ಯಂತ ಪಕ್ಷ ಸಂಘಟನೆಗೆ ಆಮ್ ಆದ್ಮಿ ಪಕ್ಷ ಮುಂದಾಗಿದ್ದು, ಮಾ.4 ರಂದು ದಾವಣೆಗೆರೆ ನಗರಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ವರಿಷ್ಠರು ಆಗಮಿಸಲಿದ್ದು, ಚುನಾವಣಾ ಪ್ರಚಾರಾರ್ಥ ರಾಯಚೂರು, ಲಿಂಗಸುಗೂರು ಮತ್ತು ಸಿಂಧನೂರು ನಗರಗಳಿಗೆ ಆಗಮಿಸುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಪಕ್ಷದ ತಾಲೂಕು ಅಧ್ಯಕ್ಷ ಎಂ.ಆರ್.ಪಾಟೀಲ್, ಮುಖಂಡರಾದ ಶಿವಪುತ್ರ ಗಾಣದಾಳ, ವೆಂಕನಗೌಡ, ಮಹಾಬಲೇಶ್ವರ, ಬೋಧು ನಾಯ್ಕ ಇದ್ದರು.