ಸುದ್ದಿಮೂಲ ವಾರ್ತೆ
ಬೆಂಗಳೂರು, ಆ, 14: ಅಶ್ವಥ್ ನಾರಾಯಣ ಅಲ್ಲ, ಆತ ನವರಂಗಿ ನಾರಾಯಣ. ಕಳ್ಳರನ್ನು ರಕ್ಷಣೆ ಮಾಡುವಲ್ಲಿ ಇವರು ಡಾಕ್ಟರೇಟ್ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಭ್ರಷ್ಟಾಚಾರ ಆರೋಪದಲ್ಲಿ ಲೋಕಾಯುಕ್ತ ತನಿಖೆಗೆ ಒತ್ತಾಯಿಸುವ ಬಿಜೆಪಿ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಡಿ. ಶಿವಕುಮಾರ್ ಬಿಜೆಪಿ ನಾಯಕರಿಗೆ ಏನೇನು ಮಾಡಲು ಸಾಧ್ಯವೋ ಎಲ್ಲವನ್ನು ಮಾಡಲಿ ಎಂದು ಸವಾಲು ಹಾಕಿದರು.
ಅಶ್ವಥ್ ನಾರಾಯಣ್ ಅವರನ್ನು ನವರಂಗಿ (ಊಸರವಳ್ಳಿ) ನಾರಾಯಣ ಎಂದು ಕರೆಯಬೇಕು. ಕಳ್ಳರನ್ನು ರಕ್ಷಿಸಿದ ಅವರಿಗೆ ಡಾಕ್ಟರೇಟ್ ನೀಡಬೇಕು. ರಾಮನಗರಕ್ಕೆ ಬಂದು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡುವುದಾಗಿ ಹೇಳಿದರು. ಆದರೆ ಏನು ಸ್ವಚ್ಛಗೊಳಿಸಿದರು? ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಮನಗರದಿಂದ ತಮ್ಮ ಪಕ್ಷವನ್ನು ಸ್ವಚ್ಛಗೊಳಿಸಿದರು. ರಾಮನಗರದಲ್ಲಿ ಬಿಜೆಪಿಯ ಚುನಾವಣಾ ಸೋಲನ್ನು ಉಲ್ಲೇಖಿಸಿ ಡಿಕೆ ಶಿವಕುಮಾರ್ ಟಾಂಗ್ ನೀಡಿದರು.
ಅಶ್ವಥ್ ನಾರಾಯಣ್ ಇನ್ನೂ ಆ ಟೆನ್ಷನ್ ನಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಅವರು ಏನು ಮಾಡಿದ್ದಾರೆ ಎಂದು ನಾವು ಇನ್ನೂ ನೋಡಿಲ್ಲ. ನಾನು ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಅವರು ಯಾವ ಕೆಲಸ ಮಾಡಿದ್ದಾರೆ ಮತ್ತು ನನ್ನ ವಿರುದ್ಧ ಯಾರನ್ನು ಎತ್ತಿ ಕಟ್ಟಿದ್ದಾರೆ ಎಂಬ ಬಗ್ಗೆ ವಿವರವಾಗಿ ವಿವರಿಸುತ್ತೇನೆ ಎಂದರು.
ನಿಜವಾದ ಗುತ್ತಿಗೆದಾರರಿಗೆ ಸಹಾಯ ಮಾಡಲು ನಾವು ತನಿಖೆ ಪ್ರಾರಂಭಿಸಿದ್ದೇವೆ. ಏನೇ ಆದರೂ ತನಿಖೆ ನಡೆಸಲು ನಿರ್ಧರಿಸಿದ್ದೇವೆ. ಅವರು ಯಾವುದೇ ಹಂತಕ್ಕೆ ಹೋಗಲಿ, ಯಾರನ್ನಾದರೂ ಭೇಟಿ ಮಾಡಲಿ, ಅವರು ಯಾವುದೇ ಆಟ ಆಡಲಿ ಅಥವಾ ಅಪಪ್ರಚಾರ ನಡೆಸಲಿ, ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಗುತ್ತಿಗೆದಾರರು ನೋವಿನಲ್ಲಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಅವರನ್ನು ಬಳಸಿಕೊಂಡ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಸಿ.ಟಿ ರವಿ, ಗೋಪಾಲಯ್ಯ ಅವರು ಮೊದಲು ಉತ್ತರ ನೀಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.