ಚಿಕ್ಕಬಳ್ಳಾಪುರ,ಜೂ.26: ಮಾದಕ ವಸ್ತುಗಳ ಸೇವನೆಯು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಸಮಾಜದ ಮತ್ತು ದೇಶದ ಅಭಿವೃದ್ಧಿಗೂ ಸಹ ಮಾರಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ತಿಳಿಸಿದರು.
ಅವರು ಸೋಮವಾರ ಮುದ್ದೇನಹಳ್ಳಿಯ ವಿ.ಟಿ.ಯು.ನ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, “ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನರು ಮೊದಲು, ಕಳಂಕ ಮತ್ತು ತಾರತಮ್ಯವನ್ನು ನಿಲ್ಲಿಸಿ, ತಡೆಗಟ್ಟುವಿಕೆಯನ್ನು ಬಲಪಡಿಸುವುದು ಎಂಬುದು ಈ ವರ್ಷದ ಘೋಷವಾಕ್ಯದಡಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯುವಜನರು ಕ್ಷಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜೊತೆಗೆ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೆಲವು ಸ್ನೇಹಿತರು, ಪರಿಚಯಸ್ತರು ಮೊದಲಿಗೆ ಮಾದಕ ವಸ್ತುಗಳ ಸೇವನೆಗೆ ಪ್ರೇರೆಪಿಸಿ ಉಚಿತವಾಗಿ ಪೂರೈಸುತ್ತಾರೆ. ವ್ಯಸನಗಳಿಗೆ ದಾಸರಾದ ಮೇಲೆ ನಿಮ್ಮನ್ನು ಅಲಕ್ಷ ಮಾಡಿ ದೂರಾಗುತ್ತಾರೆ. ಈ ರೀತಿಯ ವ್ಯಕ್ತಿಗಳಿಂದ ಹಾಗೂ ಮಾದಕ ವಸ್ತುಗಳನ್ನು ಪೂರೈಸುವವರಿಂದ ದೂರವಿರಬೇಕು. ಇಂತಹ ಜಾಲಗಳು ಕಂಡುಬಂದರೆ ಕೂಡಲೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡುವ ಮೂಲಕ ಈ ಜಾಲವನ್ನು ನಿರ್ಮೂಲನೆ ಮಾಡಲು ಸಾಮಾಜಿಕ ಜವಬ್ದಾರಿ ತೋರುವಂತಹ ಕಾರ್ಯಕ್ಕೆ ಎಲ್ಲಾ ನಾಗರಿಕರು ಮುಂದಾಗಬೇಕು. ವಿದ್ಯಾರ್ಥಿಗಳು ಈ ಪ್ರವೃತ್ತಿಯನ್ನು ಈಗಿನಿಂದಲೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವ್ಯಸನ (Addiction) ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆ, ವ್ಯಸನವು ಜೀವ-ವಿಜ್ಞಾನಕ್ಕೆ ಸಂಬಂಧಿಸಿದ ಮಿದುಳಿನ ಅಸ್ವಸ್ಥತೆ ಮೇಲೆ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಮಾದಕ-ದ್ರವ್ಯಗಳ (ಮದ್ಯ, ಸಿಗರೇಟ್, ಡ್ರಗ್ ಇತ್ಯಾದಿ)ಸೇವನೆ, ಅವಲಂಬನೆಯಿಂದ ವ್ಯಸನಕ್ಕೆ ಒಳಗಾಗಬಹುದು. ಅದ್ದರಿಂದ ಯಾರು ಕೂಡ ಮಾದಕ ವಸ್ತುಗಳ ಸೇವನೆಯ ಬಲೆಗೆ ಬೀಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಾದಕ ವ್ಯಸನದಿಂದಾಗುವ ದೈಹಿಕ, ಮಾನಸಿಕ, ಸಾಮಾಜಿಕ ಸಮಸ್ಯೆಗಳ ಅರಿವು ಯುವ ಜನಾಂಗದಲ್ಲಿ ಬಹಳ ಕಡಿಮೆ ಇದೆ. ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ವ್ಯಸನ ಮುಕ್ತ ಸಮಾಜ ಮಾಡಲು ಈ ದಿನಾಚರಣೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಎ. ಅರುಣ ಕುಮಾರಿ ರವರು ಮಾತನಾಡಿ. ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆಯ ಪ್ರಚೋದನೆಯ ಜಾಲ, ಯಾರೋ ಡ್ರಗ್ಸ್ ಅನ್ನು ತೆಗೆದುಕೊಳ್ಳುತ್ತಿರುವುದು ತಮ್ಮ ಗಮನಕ್ಕೆ ಎಲ್ಲಿಯಾದರೂ ಕಂಡು ಬಂದರೆ ಕೂಡಲೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ನೀಡಿದರೆ ಸಕ್ಷಮ ಪ್ರಾಧಿಕಾರಗಳ ಮುಖಾಂತರ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಪ್ರಾಧಿಕಾರ ಕ್ರಮವಹಿಸುತ್ತದೆ. ಪ್ರಾಧಿಕಾರದಲ್ಲಿ 3 ಲಕ್ಷಕ್ಕಿಂತ ಆದಾಯದ ಮಿತಿ ಕಡಿಮೆ ಇರುವವರಿಗೆ, ವೃದ್ಧರಿಗೆ, ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಸೇವೆಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ರಮೇಶ್ ಪಿ.ವಿ ಮಾತನಾಡಿ. ಸಮಾಜದಲ್ಲಿ ಕೆಪಿನ್, ಗಾಂಜಾ ಅಪೀಮು ಇನ್ನೂ ಅನೇಕ ಮಾದಕ ವಸ್ತುಗಳು ಜನರಿಗೆ ಸಿಗುತ್ತಿರುವುದು ಆತಂಕಕಾರಿ ವಿಚಾರ. ಮನುಷ್ಯನಿಗೆ ತನ್ನ ಜೀವನದಲ್ಲಿ ಆನಂದ, ನೆಮ್ಮದಿ ಸಿಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಸುಲಭವಾಗಿ ಮಾದಕ ವಸ್ತುಗಳಿಂದ ಸಿಗುವ ತಾತ್ಕಾಲಿಕ ಆನಂದಗಳಿಗೆ, ಮನರಂಜನೆಗಳಿಗೆ ಮಾರುಹೋಗುವ ಸಾಧ್ಯತೆ ಇರುತ್ತದೆ. ಕುಟುಂಬದಲ್ಲಿ ದಿನನಿತ್ಯ ಸಿಗುವ ಸಣ್ಣ ಸಣ್ಣ ಆನಂದವನ್ನು ನಿರ್ಲಕ್ಷಿಸಿ ಕೆಟ್ಟ ಚಟಗಳಿಗೆ ದಾಸರಾಗುವ ವ್ಯವಸ್ಥೆ ಇಂದಿನ ವಿಭಕ್ತ ಅಣು ಕುಟುಂಬಗಳಲ್ಲಿ ಕಂಡು ಬರುತ್ತಿದೆ. ಉತ್ತಮ ಸಾಮಾಜಿಕರಣದ ಕೊರತೆಯಿಂದ ತನ್ನ ಒಡನಾಡಿಗಳಲ್ಲಿ, ಸಂಬಂಧಿಕರಲ್ಲಿ ಉತ್ತಮ ಬಾಂದವ್ಯಗಳನ್ನು ಬೆಸೆದುಕೊಳ್ಳಲು ಮನುಷ್ಯ ವಿಫಲನಾಗುತ್ತಿದ್ದಾನೆ ಎಂಬ ಭಾವನೆ ಕೆಲವು ದುಷ್ಕೃತ್ಯಗಳನ್ನು ನೋಡಿದರೆ ಮೂಡುತ್ತದೆ. ಆದ್ದರಿಂದ ಸಮಾಜದಲ್ಲಿ ಎದುರಾಗುವ ಪ್ರತಿಯೊಬ್ಬರನ್ನು ಪರಸ್ಪರ ಗೌರವಿಸುವ ಜೊತೆಗೆ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳುವ ಮೂಲಕ ಉತ್ತಮ ಮನರಂಜನೆಯ ವಿಧಾನಗಳನ್ನು ಕಂಡುಕೊಳ್ಳಬೇಕು. ಕೆಟ್ಟ ಪ್ರಲೋಬನೆಗಳಿಂದ ದೂರವಿರಬೇಕು ಎಂದರು.
ಸಂತೋಷವನ್ನು ಯಾವ ರೀತಿಯಲ್ಲಿ ಪಡೆಯಬೇಕೆಂಬುದು ಮನುಷ್ಯನ ಕೈಯಲ್ಲಿಯೇ ಇದೆ.ಒಳ್ಳೆಯ ರೀತಿಯಲ್ಲಿ ಪಡೆಯಲು ಮುಂದಾಗಬೇಕು. ಮನೋರಂಜನೆಗಳನ್ನು ಮಾದಕ ವಸ್ತುಗಳ ಸೇವನೆ ಅಭ್ಯಾಸಗಳಿಂದ ಪಡೆಯಬಾರದು. ಸಮಾಜದಲ್ಲಿ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳದೆ. ಮಾದಕ ವಸ್ತುಗಳಿಗೆ ಬಲಿಯಾಗುವುದು ಎಂದರೆ, ನಮ್ಮನ್ನು ನಾವು ನಾಶಮಾಡಿಕೊಂಡಂತೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್ ಅವರು ಮಾನತಾಡಿ, ಮಾದಕ ವಸ್ತುಗಳ ಸೇವನೆಯು ಸಾವಿಗೆ ಆಹ್ವಾನ ನೀಡಿದಂತೆ. ಆರೋಗ್ಯ ಹಾಳಾಗುವುದು ಮಾತ್ರವಲ್ಲದೇ ಮಾನಸಿಕ ಖಿನ್ನತೆಗೆ ಎಡೆ ಮಾಡುತ್ತದೆ. ಮಾದಕ-ವ್ಯಸನವು ಗಂಭೀರವಾದ ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಡ್ರಗ್ ಇಂಜೆಕ್ಷನ್ ಚುಚ್ಚಿಕೊಳ್ಳುವುದು ಅಪಾಯಕಾರಿ. ಮಾದಕ ಸೇವನೆಯ ಹೊರತಾಗಿಯು ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಚಟಕ್ಕೆ ವ್ಯಸನಿಗಳು ಬಲಿಯಾಗಿರುತ್ತಾರೆ. ಇಂತಹ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥೆತೆಗೆ ಒಳಗಾಗಬಹುದು. ಆದ್ದರಿಂದ ಮಾದಕ ವಸ್ತುಗಳ ಸೇವನೆಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸಾಂಘಿಕವಾಗಿ ಕೈಗೊಳ್ಳಲು ನಾವೆಲ್ಲರೂ ಇಂದೇ ಪಣತೊಡೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ಅಬಕಾರಿ ಅಧಿಕಾರಿ ಕೆ.ಆಶಾಲತಾ, ಡಿ.ವೈ.ಎಸ್.ಪಿ. ವಾಸುದೇವ್, ನಂದಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಚ್.ಓ.ಡಿ ಸುರೇಶ್ ನಾಯ್ಕ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ ಮುರಳಿ ಮೋಹನ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನೇರಳೆ ವೀರಭದ್ರಯ್ಯ ಭವಾನಿ ಅವರು ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣಿಕೆ ವಿರುದ್ದ ಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿದರು.