ಸುದ್ದಿಮೂಲ ವಾರ್ತೆ
ಮಾಲೂರು, ಮೇ 22: ತಾಲೂಕಿನ ಜನತೆ ಕಷ್ಟಕಾಲದಲ್ಲಿ ನನ್ನನ್ನು ಎರಡನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಜನತೆಯ ನಂಬಿಕೆ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಹೆಚ್ಚಿನ ವಿಶೇಷ ಅನುದಾನಗಳು ತಂದು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದಾಗಿ ಶಾಸಕ ಕೆ ವೈ ನಂಜೇಗೌಡ ಹೇಳಿದರು.
ಪಟ್ಟಣದ ಮಾರುತಿ ಬಡಾವಣೆಯ ಕಾಂಗ್ರೆಸ್ ಮೈದಾನದಲ್ಲಿರುವ ಇಂದಿರಾ ಕ್ಯಾಂಟೀನ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ಸ್ಥಳೀಯನಾದ ನನ್ನನ್ನು ಮೊದಲನೇ ಬಾರಿಗೆ ಆಯ್ಕೆ ಮಾಡಿದ್ದರು.
ತಾಲೂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಸಿಕ್ಕಿತು. ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಸಿಗಲಿಲ್ಲ. ತಾಲೂಕಿನ ಅಭಿವೃದ್ಧಿಗೆ ಅಡ್ಡಿಪಡಿಸಿ ಸರ್ಕಾರದ ಅನುದಾನಗಳು ಅಭಿವೃದ್ಧಿಗೆ ಬಳಕೆಯಾಗದಂತೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಿದರು.
ಅಭಿವೃದ್ಧಿಗಾಗಿ ಬರುವ ಅನುದಾನಗಳನ್ನು ರಸ್ತೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡಲು ಸಹ ಬಿಡಲಿಲ್ಲ. ಇನ್ನು ಮುಂದೆ ಅವರ ಆಟ ನಡೆಯುವುದಿಲ್ಲ. ಲಂಚವಿಲ್ಲದೆ ಯಾವುದೇ ಅಧಿಕಾರಿಗಳ ಬಳಿ ಜನಸಾಮಾನ್ಯರ ಕೆಲಸಗಳು ಆಗುತ್ತಿರಲಿಲ್ಲ. ಅಧಿಕಾರಿಗಳು ನಮ್ಮ ಮಾತು ಕೇಳದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರ ಕೆಲಸವಾಗುತ್ತಿತ್ತು ಹೊರತು ಕಾಂಗ್ರೆಸ್ ಪಕ್ಷ ಹಾಗೂ ಸಾರ್ವಜನಿಕರ ಕೆಲಸಗಳು ಆಗುತ್ತಿರಲಿಲ್ಲ. ಬಿಜೆಪಿ ಸಂಸದ ಹಾಗೂ ಅಧಿಕಾರಿಗಳು, ಮುಖಂಡರಿಂದ ಅಭಿವೃದ್ಧಿಗೆ ಯಾವುದೇ ಸಹಕಾರ ಸಿಗಲಿಲ್ಲ ಆದರೂ ಸಹ ತಾಲೂಕಿನ ಜನತೆ ನನ್ನನ್ನು ಎರಡನೇ ಬಾರಿಗೆ ಕಷ್ಟದಲ್ಲಿಯೂ ಸಹ ನನ್ನನ್ನು ಕೈ ಹಿಡಿದಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳನ್ನು ಬದಲಾವಣೆ ಮಾಡಿ ಭ್ರಷ್ಟಾಚಾರ ರಹಿತ ಪಕ್ಷಾತೀತವಾಗಿ ಸಾರ್ವಜನಿಕ ಕೆಲಸಗಳನ್ನು ಮಾಡುವ ಅಧಿಕಾರಿಗಳನ್ನು ತರಲಾಗುವುದು. ಜನತೆಯ ನಂಬಿಕೆಯನ್ನು ಉಳಿಸಿಕೊಳ್ಳಲು ವಿಶೇಷ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡಲಾಗುವುದು. ಪುರಸಭೆಯಿಂದ ಆಶ್ರಯ ಯೋಜನೆ ಅಡಿ ನೀಡುವ ನಿವೇಶನಗಳನ್ನು ವಿತರಿಸಲು ಈಗಾಗಲೇ ನಿವೇಶನಕ್ಕಾಗಿ ಫಲಾನುಭವಿಗಳು ಪಾವತಿಸಿರುವ 35,000 ರೂ.ಗಳ ಹಣವನ್ನು ಮರುಪಾವತಿ ಮಾಡುವುದರ ಮೂಲಕ ಶೀಘ್ರದಲ್ಲಿಯೇ ನಿವೇಶನಗಳನ್ನು ಹಂಚಿಕೆ ಮಾಡುವ ಕೆಲಸ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ಪ್ರತಿ ತಿಂಗಳು ಇಲಾಖಾವಾರು ಪ್ರಗತಿ ಪರಿಶೀಲನ ಸಭೆ ನಡೆಸಲಾಗುವುದು. ಅಧಿಕಾರಿಗಳನ್ನು ಪ್ರತಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಾರ್ವಜನಿಕವಾಗಿ ಕ್ರಿಯಾ ಯೋಜನೆ ಸಿದ್ದುಪಡಿಸಿ ಸಮಸ್ಯೆಗಳು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದರು.
ಮಾಜಿ ಶಾಸಕ ಎ.ನಾಗರಾಜು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿ ನಾರಾಯಣ್, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂಜಿ ಮಧುಸೂಧನ್, ಎಚ್.ಎಂ. ವಿಜಯನರಸಿಂಹ, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಂ.ಎನ್. ಗುಂಡಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಸಿ. ಅಪ್ಪಾಜಿಗೌಡ, ಪುರಸಭಾ ಉಪಾಧ್ಯಕ್ಷ ಭಾರತಿ ಶಂಕ್ರಪ್ಪ, ಸದಸ್ಯರುಗಳಾದ ಇಮ್ತಿಯಾಜ್ ಖಾನ್, ಮುರುಳಿಧರ್, ಮಾಜಿ ಸದಸ್ಯ ಹನುಮಂತರೆಡ್ಡಿ, ಹಿರಿಯ ಮುಖಂಡ ರಂಗಪ್ಪ ನಲ್ಲಂಡಹಳ್ಳಿ ನಾಗರಾಜ್, ಮೈಲಂಡಳ್ಳಿ ನಾರಾಯಣ ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ. ವಕೀಲ ರಮೇಶ್ ಇನ್ನಿತರರು ಹಾಜರಿದ್ದರು.