ಸುದ್ದಿಮೂಲ ವಾರ್ತೆ
ಕುಷ್ಟಗಿ,ಜು.28:ತಾಲೂಕಿನ ನೂತನ ತಹಸೀಲ್ದಾರಾಗಿ ಶೃತಿ ಮಲ್ಲಪ್ಪ ಗೌಡರ್ ಅವರನ್ನು ಸರ್ಕಾರ ನೇಮಿಸಿದೆ.
ಕುಷ್ಟಗಿ ತಹಸೀಲ್ದಾರಾಗಿ ಸೇವೆಯಲ್ಲಿದ್ದ ಗುರುರಾಜ್ ಅವರನ್ನು ಕಳೆದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲೆಯ ಕುರಗೋಡಗೆ ವರ್ಗಾಯಿಸಲಾಗಿತ್ತು.
ತೆರವಾದ ಈ ಸ್ಥಾನಕ್ಕೆ ಕುರಗೋಡು ತಹಸೀಲ್ದಾರ್ ಕರ್ಣಂ ರಾಘವೇಂದ್ರರಾವ್ ಅವರು ಕಾರ್ಯನಿರ್ವಹಿಸಿದ್ದರು. ಸರಕಾರ ಆದೇಶದ ಮೇರೆಗೆ ತಹಸೀಲ್ದಾರ್ ಕರ್ಣಂ ರಾಘವೇಂದ್ರರಾವ್ ಅವರಿಗೆ ಮೂಲಸ್ಥಳ ಕುರಗೋಡಿಗೆ ವರ್ಗವಾಗಿದ್ದು, ಸದ್ಯ ಕುಷ್ಟಗಿ ತಹಸೀಲ್ದಾರ ಆಗಿ ಗ್ರೇಡ್-2 ತಹಸೀಲ್ದಾರ್ ಮುರಲೀಧರ್ ಮುತಾಲಿಕ್ ಪ್ರಭಾರಿ ತಹಸೀಲ್ದಾರ್ ಆಗಿ ಸೇವೆಯಲ್ಲಿದ್ದರು. ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜೆ.ಎನ್. ಸುಶೀಲ್ ಅವರ ಆದೇಶ ಮೇರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಹಸೀಲ್ದಾರಾಗಿದ್ದ ಶೃತಿ ಮಲ್ಲಪ್ಪಗೌಡ್ರು ಅವರನ್ನು ಕುಷ್ಟಗಿ ತಹಶೀಲ್ದಾರ ಆಗಿ ವರ್ಗಾಯಿಸಲಾಗಿದೆ.
ಶೃತಿ ಅವರು, ಕೆಎಎಸ್ 2015 ನೇ ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಇದೇ ಜುಲೈ 31ರಂದು ಶೃತಿ ಮಲ್ಲಪ್ಪಗೌಡ್ರು ಕುಷ್ಟಗಿ ತಹಶೀಲ್ದಾರ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.